ಮಂಡ್ಯ: ಅನಿಯಮಿತ ವಿದ್ಯುತ್ ಪೂರೈಕೆಯಿಂದಾಗಿ ಕೃಷಿ ಚಟುವಟಿಕೆ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕೃಷಿ ಪಂಪ್‌ಸೆಟ್‌ಗಳು ಹಾಳಾಗುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿರುವ ಕೃಷಿಕರು ಸೋಮವಾರ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ (ಸೆಸ್ಕ್) ಬಳಿ ಧರಣಿ ಪ್ರತಿಭಟನೆ ನಡೆಸಿದರು.ದುದ್ದ ಹೋಬಳಿಯ ಹುಲಿಕೆರೆ, ಹುಲಿಕೆರೆ ಕೊಪ್ಪಲು, ಮಾಚಹಳ್ಳಿ, ಜಯಪುರ ಗ್ರಾಮಗಳ ನೂರಕ್ಕೂ ಅಧಿಕ ಗ್ರಾಮಸ್ಥರು ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಅವರ ಕಚೇರಿ ಬಳಿ ಸೇರಿ ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಧಿಕ್ಕಾರ ಕೂಗಿದರು.}
ಈ ಗ್ರಾಮಗಳ ನಡುವೆಯೇ ವಿ.ಸಿ.ನಾಲೆ ಹಾದುಹೋಗಿದ್ದರೂ ಸಮರ್ಪಕ ನೀರಿನ ಸೌಲಭ್ಯವಿಲ್ಲದೇ ರೈತರು ನರಳುತ್ತಿದ್ದಾರೆ. ತಾತ್ಕಾಲಿಕ ವಾಗಿ ಮೋಟಾರ್ ಹೊಂದಿಸಿಕೊಂಡು ನೀರು ಪೂರೈಸಿಕೊಳ್ಳಲಾಗುತ್ತಿತ್ತು. ಈಗ ವಿದ್ಯುತ್ ಸಮಸ್ಯೆಯಿಂದಾಗಿ ಅದಕ್ಕೂ ತೊಂದರೆಯಾಗಿದೆ ಎಂದು ಖಂಡಿಸಿದರು.ಒಂದು ಕಡೆ ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ಆರು ಗಂಟೆ ಕಾಲ 3ಫೇಸ್ ವಿದ್ಯುತ್ ಕೊಡುವ ಭರವಸೆ ನೀಡುತ್ತದೆ. ಆದರೆ, ಈ ಗ್ರಾಮಗಳಲ್ಲಿ ಮೂರು ಗಂಟೆಯೂ ವಿದ್ಯುತ್ ಸರಬರಾಜು ಆಗುವುದಿಲ್ಲ ಎಂದು ಆರೋಪಿಸಿದರು.
ತರಕಾರಿ ಬೆಳೆ ಸೇರಿದಂತೆ ಈ ಭಾಗದಲ್ಲಿ ನೀರಿಲ್ಲದೇ ಬೆಳೆಗಳು ಒಣಗುವ ಸ್ಥಿತಿ ಬಂದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸೆಸ್ಕ್ ಕಚೇರಿ ಎದುರೇ ವಿಷ ಕುಡಿದು ಸಾಯದೇ ಅನ್ಯ ಮಾರ್ಗ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಸೆಸ್ಕ್ ಕಿರಿಯ ಅಧಿಕಾರಿಗಳು, ಕೃಷಿಕರ ಸಮಸ್ಯೆಯು ಅರ್ಥವಾಗಿದೆ. ವಿತರಣಾ ಜಾಲದಲಿ ಹೆಚ್ಚಿನ ಒತ್ತಡ ಇರುವುದು ಈಗಿನ ಸಮಸ್ಯೆಗೆ ಕಾರಣವಾಗಿದೆ.
ಅಧೀಕ್ಷಕರ ಎಂಜಿನಿಯರ್ ಅವರ ಜೊತೆಗೆ ಚರ್ಚಿಸಿ, ಆದಷ್ಟು ಶೀಘ್ರ ಕನಿಷ್ಠ ಮೂರು ಗಂಟೆಗಳಾದರೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಿದ್ದೇನೆ ಎಂದು ಭರವಸೆ ನೀಡಿದರು.ಧಿಕ್ಕಾರದ ಘೋಷಣೆ, ಏಕಕಾಲ ದಲ್ಲಿ ವಿವಿಧ ರೈತರು ಎದ್ದು ಆಕ್ರೋಶ ವ್ಯಕ್ತ ಪಡಿಸಲು ಮುಂದಾದ ಕಾರಣ ಕೆಲ ಹೊತ್ತು ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.