ADVERTISEMENT

ಅಲ್ಲಿ ಮಹಾಮಜ್ಜನ, ಇಲ್ಲಿ ಬರೀ ದರುಶನ

ಯೋಗೇಶ್ ಮಾರೇನಹಳ್ಳಿ
Published 12 ಸೆಪ್ಟೆಂಬರ್ 2017, 7:37 IST
Last Updated 12 ಸೆಪ್ಟೆಂಬರ್ 2017, 7:37 IST
ಅರೆತಿಪ್ಪೂರು ಗ್ರಾಮದ ಚಿಕ್ಕಬೆಟ್ಟದ ಮೇಲೆ ಹಾಳುಹಂಪಿಯಂತೆ ಕಾಣುವ ಜೈನ ಬಸದಿ
ಅರೆತಿಪ್ಪೂರು ಗ್ರಾಮದ ಚಿಕ್ಕಬೆಟ್ಟದ ಮೇಲೆ ಹಾಳುಹಂಪಿಯಂತೆ ಕಾಣುವ ಜೈನ ಬಸದಿ   

ಮಂಡ್ಯ: ಹಾಸನ ಜಿಲ್ಲೆ, ಶ್ರವಣಬೆಳಗೊಳ ಕ್ಷೇತ್ರದ ವಿಶ್ವಪ್ರಸಿದ್ಧ ಬಾಹುಬಲಿ ಮೂರ್ತಿ ಮಹಾಮಜ್ಜನಕ್ಕೆ ಮೈಯ್ಯೊಡ್ಡಲು ಸಿದ್ಧನಾಗುತ್ತಿದ್ದಾನೆ. ಇತ್ತ ಜಿಲ್ಲೆಯ ಅರೆತಿಪ್ಪೂರು ಬೆಟ್ಟದ ತುತ್ತ ತುದಿಯಲ್ಲಿ ಏಕಾಂಗಿಯಾಗಿ ನಿಂತಿರುವ, ಅಷ್ಟು ಪ್ರಸಿದ್ಧನಲ್ಲದ, ಪುರಾತನ ಬಾಹುಬಲಿ ಮೂರುತಿ ಭಕ್ತರಿಗೆ ದರುಶನ ನೀಡಲು ಸಜ್ಜಾಗುತ್ತಿದ್ದಾನೆ.

ಇಡೀ ಶ್ರವಣಬೆಳಗೊಳ ಕ್ಷೇತ್ರ ಅರೆತಿಪ್ಪೂರಿನ ತದ್ರೂಪ. ಅರೆತಿಪ್ಪೂರು ಶ್ರವಣಬೆಳಗೊಳಕ್ಕಿಂತ ಪುರಾತನವಾದುದು, ಅಲ್ಲಿಯ ಮೂರ್ತಿ ಕ್ರಿ.ಶ. 973ರಲ್ಲಿ ನಿರ್ಮಾಣಗೊಂಡಿದ್ದರೆ ಇಲ್ಲಿಯದ್ದು ಕ್ರಿ.ಶ.843ರಲ್ಲೇ ನಿರ್ಮಾಣಗೊಂಡಿದೆ. ಅರೆತಿಪ್ಪೂರು ಮಾದರಿಯಲ್ಲೇ ಶ್ರವಣಬೆಳಗೊಳ ಕ್ಷೇತ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ಜೈನ ಪರಂಪರೆ ಹೇಳುತ್ತದೆ. ಅಲ್ಲಿರುವಂತೆ ಇಲ್ಲಿಯೂ ಚಿಕ್ಕಬೆಟ್ಟ, ದೊಡ್ಡ ಬೆಟ್ಟಗಳಿವೆ. ಕಲ್ಯಾಣಿ, ಬಸದಿಗಳಿವೆ. 24 ತೀರ್ಥಂಕರರ ಮೂರ್ತಿಗಳಿವೆ.ಅಲ್ಲಿ ಗುಳ್ಳಕಾಯಿ ಅಜ್ಜಿ ಇದ್ದರೆ ಇಲ್ಲಿ ಕೂಷ್ಮಾಂಡಿನಿ ದೇವಿ ಇದ್ದಾಳೆ. ಎರಡೂ ಕ್ಷೇತ್ರಗಳ ಬೆಟ್ಟದ ತಟದಲ್ಲಿ ಕೊಳಗಳಿವೆ, ತಾವರೆ ಅರಳಿವೆ, ನವಿಲು ಗರಿಬಿಚ್ಚಿ ಕುಣಿಯುತ್ತವೆ.

ಕೊಕ್ಕರೆಬೆಳ್ಳೂರಿನ ಸುಂದರ ಪರಿಸರದಲ್ಲಿ ಅರಳಿರುವ ಅರೆತಿಪ್ಪೂರಿನ ಚಿಕ್ಕ, ದೊಡ್ಡ ಬೆಟ್ಟಗಳ ಪ್ರತಿ ಕಲ್ಲುಗಳೂ ಸಾವಿರಾರು ವರ್ಷಗಳ ಜೈನ ಇತಿಹಾಸ ವನ್ನು ಸಾರಿ ಹೇಳುತ್ತಿವೆ. ಚೋಳ, ಹೊಯ್ಸಳ ಮತ್ತು ವಿಜಯನಗರ ಅರಸರ ಆಳ್ವಿಕೆಯಲ್ಲಿದ್ದ ಈ ಕ್ಷೇತ್ರ ಉತ್ತುಂಗ ಸ್ಥಿತಿಯಲ್ಲಿತ್ತು. ಆದರೆ ಕಾಲ ಕ್ರಮೇಣ ‘ಹಾಳು ಹಂಪಿ’ಯಂತಾಯಿತು. ಚಿಕ್ಕಬೆಟ್ಟದ ಮೇಲಿದ್ದ 12 ದೇವಾಲಯ ಗಳು ಶಿಥಿಲಗೊಂಡು ಧರೆಗುರುಳಿದವು. ತೀರ್ಥಂಕರರ ಮೂರ್ತಿಗಳು ಕುರೂಪವಾದವು. ದೊಡ್ಡ ಬೆಟ್ಟದ ಮೇಲೆ ಭಕ್ತರ ಮನದಿಚ್ಛೆ ಪೂರೈಸುತ್ತಿದ್ದ ಬಾಹುಬಲಿ ಮೂರ್ತಿ ಏಕಾಂಗಿಯಾದ.

ADVERTISEMENT

ಬರೀ ದರ್ಶನ: ಸಾವಿರಾರು ವರ್ಷಗಳ ಇತಿಹಾಸ ಹೇಳುವ ಅರೆತಿಪ್ಪೂರಿನ ಬಾಹುಬಲಿ ಕಾಲ ಗರ್ಭದಲ್ಲಿ ಮರೆಯಾಗಿದ್ದಾನೆ. ಅತ್ತ ಶ್ರವಣಬೆಳಗೊಳದಲ್ಲಿ ಮಹಾಮಸ್ತ ಕಾಭಿಷೇಕದ ಸಕಲ ಸಿದ್ಧತೆಗಳು ನಡೆಯುತ್ತಿವೆ. ಶ್ರವಣಬೆಳಗೊಳಕ್ಕೆ ಭೇಟಿ ನೀಡುವ ಜೈನಮುನಿಗಳು ಅರೆತಿಪ್ಪೂರಿಗೆ ತಪ್ಪದೇ ಭೇಟಿ ನೀಡುತ್ತಾರೆ. ಆದರೆ ಶ್ರವಣಬೆಳಗೊಳದಲ್ಲಿ ಇರುವ ಸಂಭ್ರಮ ಇಲ್ಲಿಲ್ಲ. ಬರೀ ದೇವರ ದರ್ಶನ ಮಾಡಿ ಮುರಿದು ಬಿದ್ದ ಮೂರ್ತಿಗಳನ್ನು ನೋಡಿ ಕಣ್ಣೀರು ಹಾಕುತ್ತಾರೆ.

‘ಇಲ್ಲಿಯ ಮೂರ್ತಿಗಳು ರೂಪ ಕಳೆದುಕೊಂಡಿವೆ. ಕೆಲವು ಮೂರ್ತಿಗಳು ಕಳ್ಳರ ಪಾಲಾಗಿವೆ. 2 ಸಾವಿರ ವರ್ಷಗಳ ಹಿಂದೆ ಈ ಬೆಟ್ಟಗಳ ಮೇಲಿದ್ದ ವೈಭವ ಮತ್ತೆ ಬರಬೇಕು. ಶ್ರವಣಬೆಳಗೊಳದಲ್ಲಿ ನಡೆಯುವ ಅಭಿಷೇಕದಂತೆ ಇಲ್ಲಿಯೂ ಮಹಾಮಸ್ತಕಾಭಿಷೇಕ ನಡೆಯಬೇಕು. ಮೊದಲು ದೊಡ್ಡಬೆಟ್ಟಕ್ಕೆ ತೆರಳಲು ದಾರಿ ನಿರ್ಮಿಸಬೇಕು’ ಎಂದು ಬಾಹುಬಲಿ ದಿಗಂಬರ ತೀರ್ಥಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಎಂ.ಎ.ಬ್ರಹ್ಮದೇವ ಆಗ್ರಹಿಸಿದರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರೇರಣೆಯಿಂದ ಸ್ಥಾಪಿಸಲಾಗಿರುವ ಈ ಟ್ರಸ್ಟ್‌ ಅರೆತಿಪ್ಪೂರಿನ ದೊಡ್ಡಬೆಟ್ಟದ ತಪ್ಪಲಲ್ಲಿ ಆದಿನಾಥ ದೇವಾಲಯ ಹಾಗೂ ಒಂದು ವಸತಿಗೃಹ ನಿರ್ಮಿಸಿದೆ. ಶ್ರವಣಬೆಳಗೊಳದಲ್ಲಿ ನಡೆಯುವ ಮಸ್ತಕಾಭಿಷೇಕದ ವೇಳೆ ಅರೆತಿಪ್ಪೂರಿಗೆ ಬರುವ ಭಕ್ತರಿಗೆ ಸಕಲ ಸೌಲಭ್ಯ ನೀಡಲು ಈ ಟ್ರಸ್ಟ್‌ ಸಿದ್ಧವಾಗುತ್ತಿದೆ.

ಉತ್ಖನನ: ಭಾರತೀಯ ಪುರಾತನ ಸರ್ವೇಕ್ಷಣಾ (ಎ.ಎಸ್‌.ಐ) ಸಂಸ್ಥೆ ವತಿಯಿಂದ 2015–16ನೇ ಸಾಲಿನಲ್ಲಿ ಅರೆತಿಪ್ಪೂರಿನ ಚಿಕ್ಕ ಬೆಟ್ಟ, ದೊಡ್ಡ ಬೆಟ್ಟದಲ್ಲಿ ಉತ್ಖನನ ಮಾಡಲಾಗಿದೆ. ಮಣ್ಣಿನಲ್ಲಿ ಹೂತು ಹೋಗಿದ್ದ ಹಲವು ಮೂರ್ತಿಗಳನ್ನು ಹೊರತೆಗೆಯಲಾಗಿದೆ. ಆದರೆ ಭೂಮಿಯಿಂದ ಹೊರತೆಗೆದ ಸ್ಮಾರಕಗಳಿಗೆ ರಕ್ಷಣೆ ನೀಡಲು ಎಎಸ್‌ಐ ವಿಫಲವಾಗಿದೆ ಎಂದು ಸ್ಥಳೀಯರು ಹಾಗೂ ಜೈನ ಧರ್ಮೀಯರು ಆರೋಪಿಸುತ್ತಾರೆ.

‘ಸ್ಮಾರಕಗಳು ನೈಸರ್ಗಿಕವಾಗಿ ಭೂಮಿಯೊಳಗೆ ರಕ್ಷಿಸಲ್ಪಟ್ಟಿದ್ದವು. ಆದರೆ ಎಎಸ್‌ಐ ಈಗ ಹೊರತೆಗೆದು ಮೂರ್ತಿಗಳನ್ನು ಚೆಲ್ಲಾಡಿದೆ. ಬಸದಿಗಳ ಅಡಿಪಾಯ ಕುಸಿದು ಬೀಳುತ್ತಿದೆ. ಅದರ ರಕ್ಷಣೆಗೆ ಎ.ಎಸ್‌.ಐ ಕ್ರಮ ಕೈಗೊಂಡಿಲ್ಲ. ಕಡೇ ಪಕ್ಷ ಒಂದು ಮಂಟಪವನ್ನಾದರೂ ನಿರ್ಮಿಸಿ ರಕ್ಷಿಸಿಲ್ಲ. ಕಾಲನ ಸುಳಿಗೆ ಸಿಲುಕಿ ಈ ಪುಣ್ಯಕ್ಷೇತ್ರ ಹಾಳಾಗಿದೆ. ಈಗ ಎ.ಎಸ್‌.ಐ ಮತ್ತಷ್ಟು ಹಾಳು ಮಾಡುತ್ತಿದೆ’ ಎಂದು ಟ್ರಸ್ಟಿ ಎಂ.ಪಿ.ಮಹೇಂದ್ರಬಾಬು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.