ADVERTISEMENT

ಆಯುಧಪೂಜೆ: ಸೇವಂತಿಗೆ ಸಡಗರ

ಹಾರೋಹಳ್ಳಿ ಪ್ರಕಾಶ್‌
Published 21 ಅಕ್ಟೋಬರ್ 2012, 10:25 IST
Last Updated 21 ಅಕ್ಟೋಬರ್ 2012, 10:25 IST
ಆಯುಧಪೂಜೆ: ಸೇವಂತಿಗೆ ಸಡಗರ
ಆಯುಧಪೂಜೆ: ಸೇವಂತಿಗೆ ಸಡಗರ   

ಪಾಂಡವಪುರ: ಆಯುಧಪೂಜೆ ಮತ್ತು ವಿಜಯದಶಮಿ ಸಂಭ್ರಮಕ್ಕೆ ಸೇವಂತಿಗೆ ಹೂ ಹಾರಗಳು ಭರದಿಂದ ಸಿದ್ಧಗೊಳ್ಳುತ್ತಿವೆ. ತಾಲ್ಲೂಕಿನ ಅಂತನಹಳ್ಳಿ, ಗಿರಿಯಾರಹಳ್ಳಿ, ಮಲ್ಲಿಗೆರೆ, ಬಿಂಡಹಳ್ಳಿ, ಡಿಂಕ, ಬನ್ನಂಗಾಡಿ ಗ್ರಾಮಗಳ ಮುಖ್ಯಬೆಳೆಗಳಲ್ಲಿ ಸೇವಂತಿಗೆಯೂ ಒಂದು. ಇದೀಗ ಈ ಗ್ರಾಮಗಳಲ್ಲಿ ಸೇವಂತಿ ಹಾರ ಕಟ್ಟುವ ಕಾಯಕದಲ್ಲಿ ಬೆಳೆಗಾರರು ಮಗ್ನರಾಗಿದ್ದಾರೆ.

ಸೇವಂತಿಗೆ ಹೂವು ಆರು ತಿಂಗಳ ಬೆಳೆ. ಈ ಹೂವಿನಲ್ಲಿ ಕಡೂರು ಕುಪ್ಪ, ಚಾಂದಿನಿ, ಕಸ್ತೂರಿ ಎಂದು ಮೂರು ವಿಧ. ಗಣೇಶ ಹಬ್ಬ, ಆಯುಧಪೂಜೆ, ವಿಜಯದಶಮಿಗೆ ಕಡೂರು ಕುಪ್ಪ, ದೀಪಾವಳಿ, ಕಾರ್ತಿಕ ಹಬ್ಬಕ್ಕೆ ಚಾಂದಿನಿ ಮತ್ತು ಸಂಕ್ರಾಂತಿ, ಶಿವರಾತ್ರಿ ವೈಭವಕ್ಕೆ ಕಸ್ತೂರಿ ಸಾಥ್ ನೀಡುತ್ತವೆ.

ಫೆಬ್ರವರಿ ತಿಂಗಳಲ್ಲಿ ಹೂವಿನ ಬೇರು ಕಿತ್ತು ಪಾತಿ ಮಾಡಿ, ಮಾರ್ಚ್-ಏಪ್ರಿಲ್‌ನಲ್ಲಿ ಸಸಿ ನೆಡಲಾಗುತ್ತದೆ. ಬೆಳೆ ಬರುವುದರಲ್ಲಿ ಮೂರು ಬಾರಿ ಗುಣಿ ಕಟ್ಟಬೇಕಾಗುತ್ತದೆ. ಈ ಸಸಿಗಳಿಗೆ ನಿತ್ಯ ಬಿಂದಿಗೆ ಮೂಲಕವೆ ನೀರುಣಿಸಬೇಕು. ಕೆಲವೊಮ್ಮೆ ಗೆಡ್ಡೆರೋಗ, ಮೊಗ್ಗಿನರೋಗ, ತರಗೆಲೆ ರೋಗ ತಗುಲುವ ಸಾಧ್ಯತೆಗಳು ಇಲ್ಲದಿಲ್ಲ. ಯಥೇಚ್ಛವಾಗಿ ಮಳೆಬಿದ್ದರೂ ಬೆಳೆ ಹಾನಿಗೊಳ್ಳುತ್ತದೆ ಎನ್ನುತ್ತಾರೆ ಬೆಳೆಗಾರರು.

ಸೇವಂತಿಗೆ ಹೂಹಾರಗಳನ್ನು ನಾಲ್ಕೈದು ದಿನ ಇಟ್ಟರೂ ಕೆಡುವುದಿಲ್ಲ. ಹಬ್ಬಹರಿದಿನಗಳಲ್ಲಿ, ಸಭೆ ಸಮಾರಂಭ, ದೇವರ ಪೂಜೆ, ಅಲಂಕಾರ, ವಾಹನಗಳ ಶೃಂಗಾರ ಎಲ್ಲಕ್ಕೂ ಈ ಹೂವು ಬಳಕೆಯಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.