ADVERTISEMENT

`ಆಯುಷ್'ಗೆ ಕೆ.ಶೆಟ್ಟಹಳ್ಳಿ ಗ್ರಾ.ಪಂ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 6:58 IST
Last Updated 2 ಜುಲೈ 2013, 6:58 IST

ಶ್ರೀರಂಗಪಟ್ಟಣ: ರಾಜ್ಯ ಸರ್ಕಾರದ ಮಹತ್ವದ 3 ವರ್ಷಗಳ `ಆಯುಷ್ ಯೋಜನೆ'ಗೆ ತಾಲ್ಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮ ಆಯ್ಕೆಯಾಗಿದೆ.

ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಗ್ರಾಮಗಳಲ್ಲಿ ಪುನರ್ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಕೆ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮೈಸೂರಿನ ಜೆಎಸ್‌ಎಸ್ ಆಯುರ್ವೇದ ಕಾಲೇಜಿಗೆ ಯೋಜನೆಯ ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ. ಸರ್ಕಾರದ ಅನುದಾನದಲ್ಲಿ ಜೆಎಸ್‌ಎಸ್ ಆಯುರ್ವೇದ ಕಾಲೇಜು ಜನರಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದೆ.

ಈ ಸಂಬಂಧ ಸರ್ವೆ ಕಾರ್ಯ ಮುಗಿದಿದ್ದು,  ಕೆ. ಶೆಟ್ಟಹಳ್ಳಿಯಲ್ಲಿ ಚಿಕಿತ್ಸಾಲಯ ತೆರೆಯಲು ಕಟ್ಟಡ ಗುರುತಿಸಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಜುಲೈ ಎರಡನೇ ವಾರದಲ್ಲಿ ಯೋಜನೆ ಚಾಲನೆ ಪಡೆಯಲಿದೆ ಎಂದು ಕೆ. ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಸುರೇಂದ್ರ ತಿಳಿಸಿದ್ದಾರೆ.

ಆಯುಷ್ ಯೋಜನೆಯಲ್ಲಿ ಮೂರು ವರ್ಷಗಳ ಕಾಲ ಗ್ರಾಮೀಣ ಭಾಗದ ಜನರಿಗೆ `ಮನೆ ಮದ್ದು' ಕುರಿತು ಮಾಹಿತಿ ನೀಡಲಾಗುವುದು. ಹಿತ್ತಲು ಗಿಡಗಳ ಮಹತ್ವ ಮತ್ತು ಅವುಗಳ ಉಪಯೋಗ ತಿಳಿಸಿಕೊಡಲಾಗುವುದು. ಸಣ್ಣ ಪ್ರಮಾಣದ ಅನಾರೋಗ್ಯ ಸಮಸ್ಯೆಗೆ ಸ್ವತಃ ಚಿಕಿತ್ಸೆ ಮಾಡಿಕೊಳ್ಳುವುದನ್ನು ಜನರಿಗೆ ಹೇಳಿಕೊಡಲಾಗುತ್ತದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ 3 ವರ್ಷಗಳ ಕಾಲ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳು ನಡೆಯಲಿವೆ. ರಾಜ್ಯದ 10 ಜಿಲ್ಲೆಗಳಲ್ಲಿ 10 ಗ್ರಾಮಗಳು ಮಾತ್ರ ಆಯ್ಕೆಯಾಗಿದ್ದು, ಅವುಗಳಲ್ಲಿ ಕೆ. ಶೆಟ್ಟಹಳ್ಳಿ ಕೂಡ  ಒಂದು ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.