ADVERTISEMENT

ಆ.7ರಿಂದ ಸೀಳು ತುಟಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 7:30 IST
Last Updated 17 ಜುಲೈ 2012, 7:30 IST

ನಾಗಮಂಗಲ: ಅಂಗ ವೈಕಲ್ಯ ಹೊಂದಿರುವ ಮಕ್ಕಳು ಮತ್ತು ಅವರ ಪೋಷಕರ ಮುಖದಲ್ಲಿ ಮಂದಹಾಸ ಮೂಡಬೇಕು. ಬಡವರಿಗೆ, ರೈತರಿಗೆ ಕಷ್ಟ ಸಾಧ್ಯವಾದ ಚಿಕಿತ್ಸೆ ಉಚಿತವಾಗಿ ಸಿಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ಅಭಿಪ್ರಾಯ ಪಟ್ಟರು.

ಅವರು ಇತ್ತೀಚೆಗೆ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸೀಳು ತುಟಿ ಮತ್ತು ಸೀಳು ಅಂಗುಳ ಶಾಪವಲ್ಲ. ಅದನ್ನು ಸರಿಪಡಿಸುವ ಮೂಲಕ ನೊಂದ ಕುಟುಂಬದಲ್ಲಿ ಸಂತಸ ಮೂಡಿಸುವುದು ನಮ್ಮ ಆದ್ಯ ಗುರಿ. ಆಗಸ್ಟ್ 7 ರಿಂದ 17 ರವರೆಗೆ ತಾಲ್ಲೂಕಿನ ಬಿ.ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಮೆರಿಕಾದ ರೋಟೋ ಪ್ಲಾಸ್ಟ್ ಇಂಟರ್ ನ್ಯಾಷನಲ್ ನ 30 ತಜ್ಞ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸುತ್ತದೆ. ಶಸ್ತ್ರ ಚಿಕಿತ್ಸೆ ನಂತರದ ಔಷಧೋಪಚಾರ, ವಾರ್ಡ್ ಸೌಲಭ್ಯ, ಊಟದ ವ್ಯವಸ್ಥೆ ಸಂಪೂರ್ಣ ಉಚಿತವಾಗಿರುತ್ತದೆ.
 
ಪ್ರತಿ ವರ್ಷ 150 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಸುಟ್ಟ ಗಾಯಗಳಿಂದ ಉಂಟಾದ ವಿರೂಪ ಸರಿಪಡಿಸುವ ಚಿಕಿತ್ಸೆ ಕೂಡ ನಡೆಯಲಿದೆ. ಈ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಹೆಚ್ಚು ಜನರು ಪಾಲ್ಗೊಂಡು ಶಿಬಿರದ ಉಪಯೋಗ ಪಡೆದು ಕೊಳ್ಳುವಂತೆ ಕರೆ ಕೊಟ್ಟರು.

ಶ್ರೀ ಮಠದ ವ್ಯವಸ್ಥಾಪಕ ರಾಮಕೃಷ್ಣೇಗೌಡ ಮಾತನಾಡಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಪಟ್ಟಾಭಿಷೇಕದ ಕೊಡುಗೆಯಾಗಿ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು.

ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯ ಅಧೀಕ್ಷಕ ಡಾ.ಎಂ.ಇ.ಮೋಹನ್ ಮಾತನಾಡಿ ಶ್ರೀ ಮಠದ ಆಶ್ರಯದಲ್ಲಿ ಆಸ್ಪತ್ರೆ ವತಿಯಿಂದ ಪ್ರತಿ ತಿಂಗಳು ಗ್ರಾಮೀಣ ಪ್ರದೇಶದಲ್ಲಿ 1 ಮೆಗಾ ಕ್ಯಾಂಪ್ ಆಯೋಜಿಸಲಾಗುವುದು. 4 ಸಾವಿರ ಮಂದಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಕ್ಯಾನ್ಸರ್ ತಪಾಸಣೆ ಕೂಡ ಮಾಡಲಾಗುವುದು ಎಂದು ತಿಳಿಸಿದರು.

ಸೀಳು ತುಟಿ ಮತ್ತು ಸೀಳು ಅಂಗುಳ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರದ ಬಗೆಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ 9900758946, 9448581730, 9945558579 ಹಾಗೂ ಕಚೇರಿ ಸಂಖ್ಯೆ 08234-287435, 287575, 287755, 287011 ಗೆ ಸಂಪರ್ಕಿಸಲು ಕೋರಲಾಗಿದೆ.

ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಪ್ರಾಧ್ಯಾಪಕ ಡಾ.ಎಂ.ಶಿವಣ್ಣ ಮತ್ತು ಆದಿಚುಂಚನಗಿರಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.