ADVERTISEMENT

ಒಡೆಯರ್ ಮಂಟಪಕ್ಕೆ ಬೀಗ!

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 8:10 IST
Last Updated 19 ಅಕ್ಟೋಬರ್ 2012, 8:10 IST

ಶ್ರೀರಂಗಪಟ್ಟಣ: ಮೈಸೂರಿನಲ್ಲಿ ದಸರಾ ಉತ್ಸವ ಈಗಾಗಲೇ ಕಳೆಗಟ್ಟಿದೆ. ದಸರಾ ಮೂಲ ನೆಲೆಯಾದ ಶ್ರೀರಂಗಪಟ್ಟಣದಲ್ಲಿ ಈ ಬಾರಿ ಅ.20ರಿಂದ 3 ದಿನಗಳ ಕಾಲ ದಸರಾ ಉತ್ಸವ ನಡೆಸಲಾಗುತ್ತಿದೆ. ಆದರೆ ದಸರಾ ಮಹೋತ್ಸವ ಆಚರಣೆಯ ಕೇಂದ್ರ ಬಿಂದುವಾಗಿದ್ದ ಒಡೆಯರ್ ವಂಶದ ದೊರೆಗಳನ್ನು ನೆನೆಸಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ.

 ಪಾಶ್ಚಾತ್ಯ ಸಂಗೀತ, ಹಾಸ್ಯೋತ್ಸವ, ಲೇಸರ್ ಶೋ, ಭರತನಾಟ್ಯಕ್ಕೆ ದಸರಾ ಆಚರಣೆ ಸೀಮಿತವಾದಂತಿದೆ. ಶ್ರೀರಂಗಪಟ್ಟಣದಲ್ಲಿ 190 ವರ್ಷಗಳ ಕಾಲ (1610-1799) ದಸರಾ ಉತ್ಸವ ಸಡಗರ, ಸಂಭ್ರಮದಿಂದ ನಡೆದಿದೆ. ಸಂಭ್ರಮದ ದಸರಾ ಉತ್ಸವ ನಡೆಯಲು ಕಾರಣರಾದ ಒಡೆಯರ್ ವಂಶಸ್ಥರನ್ನು ನೆನೆಯುವ ಕಾರ್ಯ ತಾಲ್ಲೂಕು ಆಡಳಿತ ಮಾಡದೇ ಇರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರ್ ಜನಿಸಿದ ಮಂಟಪಕ್ಕೆ ಬೀಗ ಹಾಕಲಾಗಿದೆ. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಬಲ ಭಾಗದ ಮಂಟಪದಲ್ಲಿ ಖಾಸಾ ಚಾಮರಾಜ ಒಡೆಯರ್ ಅವರ ಪುತ್ರ ಮುಮ್ಮಡಿ ಕೃಷ್ಣರಾಜ ಒಡೆಯರ್ ಜುಲೈ 9, 1794ರಂದು ಜನಿಸಿದರು. ಆ ಮಂಟಪ ಈಗ ರಾಜ್ಯ ಪ್ರಾಚ್ಯವಸ್ತು ಹಾಗೂ ವಸ್ತುಸಂಗ್ರಹಾಲಯಗಳ ಇಲಾಖೆಯ ಸುಪರ್ದಿಯಲ್ಲಿದೆ. ಈ ಮಂಟಪದ ಒಳ ಹೊಕ್ಕು ಕಣ್ತುಂಬಿಕೊಳ್ಳುವ ಭಾಗ್ಯ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಇಲ್ಲ.

ಅರಮನೆ ಇದ್ದ ಸ್ಥಳ ಈಗ ಉದ್ಯಾನವಾಗಿ ಮಾರ್ಪಟ್ಟಿದೆ. ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ ಇದ್ದ, ದೊರೆಗಳು ಆಳಿದ, ಬಾಳಿದ ಅರಮನೆಯ ಕಾಲ್ಪನಿಕ ಚಿತ್ರ ಕೂಡ ಲಭ್ಯ ಇಲ್ಲ. `ಇಲ್ಲೊಂದು ಗಂಧದ ಮರಗಳನ್ನು ಬಳಸಿ ನಿರ್ಮಿಸಿದ್ದ ಅರಸರ ಸುಂದರ ಅರಮನೆ ಇತ್ತಂತೆ. ಬೆಂಕಿಗೆ ಆಹುತಿಯಾಯಿತಂತೆ~. ಇಂತಹ ಅಂತೆ ಕಂತೆಗಳು ಮಾತ್ರ ಹರಿದಾಡುತ್ತಿವೆ. ಅರಮನೆಯ ಮಗ್ಗುಲಲ್ಲಿ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಿರುವ ಕೊಳಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಿ ಅದರ ನೈಜ ಅಂದವನ್ನು ಕೆಡಿಸಲಾಗಿದೆ. ಈ ವಸಂತ ಕೊಳ ರಚನಾ ಶೈಲಿಯಲ್ಲಿ ಅದ್ಭುತ ಎನಿಸುವಂತಿದ್ದರೂ ಮೂಲ ಕೊಳವಾಗಿ ಅದು ಉಳಿದಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.