ADVERTISEMENT

ಕನಿಷ್ಠ ಕೂಲಿಗೆ ಒತ್ತಾಯ: ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 5:30 IST
Last Updated 20 ಏಪ್ರಿಲ್ 2012, 5:30 IST

ಮಂಡ್ಯ: ಸಂಘಟಿತ ಮತ್ತು ಅಸಂಘಟಿತ ಕೂಲಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಪಾವತಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಪಡಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಹೆದ್ದಾರಿಯಲ್ಲಿ ಮೆರವಣಿಗೆ ತೆರಳಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ಕನಿಷ್ಠ ಕೂಲಿ ಪಾವತಿಸುವುದು ಸೇರಿದಂತೆ ಬಜೆಟ್‌ನಲ್ಲಿ ಕಾರ್ಮಿಕರ ಪರವಾಗಿ ಯಾವುದೇ ನಿರ್ದಿಷ್ಟ ಕಾರ್ಯಕ್ರಮ ಪ್ರಕಟಿಸದೇ ಸರ್ಕಾರ ನಿರ್ಲಕ್ಷಿಸಿದೆ ಎಂದು ಟೀಕಿಸಿದರು.

ಮಹಿಳೆಯರು ಸೇರಿದಂತೆ ಅಸಂಖ್ಯ ಅಸಂಘಟಿತ ವಲಯದ ಕಾರ್ಮಿಕರು ಪಾಲ್ಗೊಂಡಿದ್ದು, ಬೇಡಿಕೆಗಳ ಭಿತ್ತಿಪತ್ರ ಹಿಡಿದು ಗಮನಸೆಳೆದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕೆಲಹೊತ್ತು ವಾಹನ ಸಂಚಾರ ವ್ಯವಸ್ಥೆಯು ಏರುಪೇರಾಯಿತು.

ಬೀಡಿ ಕಾರ್ಮಿಕರ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ, ವಿವಿಧ ಬೇಡಿಕೆಗಳ ಬಗೆಗೆ ಗಮನಸೆಳೆದವು. ಸೂಚ್ಯಂಕವನ್ನು ಆಧರಿಸಿ ಕನಿಷ್ಠ ಕೂಲಿಯನ್ನು ನೀಡಬೇಕು. ಎಲ್ಲ ಗುತ್ತಿಗೆ, ದಿನಗೂಲಿ ನೌಕರರಿಗೆ ಕೈಗಾರಿಕಾ ಕನಿಷ್ಠ ವೇತನ ಜಾರಿಗೊಳಿಸಬೇಕು, 10 ವಷ ಪೂರೈಸಿರವ ಎಲ್ಲ ಗುತ್ತಿಗೆ, ದಿನಗೂಲಿ ನೌಕರರಿಗೆ ಕಾಯಂ ಪಡಿಸಬೇಕು, ಅಂಗನವಾಡಿ, ಅಕ್ಷರ ದಾಸೋಹ, ಆಶಾ ಮತ್ತಿತರ ನೌಕರರಿಗೂ ಅನ್ವಯಿಸಿ ಸೇವೆ ಕಾಯಂಗೊಳಿಸುವ ಆದೇಶ ಜಾರಿಗೊಳಿಸಲು ಆಗ್ರಹಪಡಿಸಿದರು.

ಬೀಡಿ ಕಾರ್ಮಿಕರು ಪ್ರತ್ಯೇಕ ಮನವಿಯಲ್ಲಿ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬೀಡಿ ಕಾರ್ಮಿಕರಿಗಾಗಿ ಪರಿಷ್ಕೃತ ಕೂಲಿ ದರವನ್ನು ಜಾರಿಗೆ ತರಬೇಕು, ಈ ಸಂಬಂಧ ಗೆಜೆಟ್ ಪ್ರಕಟಣೆ ಹೊರಡಿಸಲು ಒತ್ತಾಯಿಸಿದರು.
ಸಿಐಟಿಯು, ಗ್ರಾಮ ಪಂಚಾಯಿತಿ ನೌಕರರ ಸಂಘ, ಬೀಡಿ ಕಾರ್ಮಿಕರ ಸಂಘದ ಮುಖಂಡರುಗಳಾದ ಎಂ.ಎಚ್.ವಿಲಾಯತ್ ಉನ್ನೀಸಾ, ಎನ್.ಸುರೇಂದ್ರ, ಸಿ.ಕುಮಾರಿ, ನಜೀಮ್ ಉನ್ನೀಸಾ, ಮಯಿಮುನ್ನೀಸಾ, ಮಂಜುಳಾ ರಾಜ್, ಮಹದೇವಯ್ಯ, ಸಿ.ಎನ್.ಲೋಕೇಶ್, ಜಯಲಕ್ಷ್ಮಮ್ಮ ಮತ್ತು ಇತರರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.