ADVERTISEMENT

ಕನಿಷ್ಠ ವೇತನಕ್ಕಾಗಿ ಕಾರ್ಮಿಕರ ಒತ್ತಾಯ

ಶಾಹಿ ಗಾರ್ಮೆಂಟ್ಸ್‌ನಲ್ಲಿ 7 ಸಾವಿರಕ್ಕೂ ಹೆಚ್ಚು ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 11:00 IST
Last Updated 13 ಜೂನ್ 2018, 11:00 IST

ಮಂಡ್ಯ: ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್‌ಪೋರ್ಟ್‌ ಸಿದ್ಧ ಉಡುಪು ಕಾರ್ಖಾನೆಯಲ್ಲಿ ದುಡಿ
ಯುತ್ತಿರುವ ಸಾವಿರಾರು ಮಹಿಳೆಯರು ಕನಿಷ್ಠ ವೇತನ ಹಾಗೂ ಸೌಲಭ್ಯವಿಲ್ಲದೇ ಪರದಾಡುತ್ತಿದ್ದು ಪ್ರತಿಭಟನೆಯ ಹಾದಿ ತುಳಿದಿದ್ದಾರೆ.

ಕಾರ್ಖಾನೆಯ ಮೂರು ಘಟಕಗಳಲ್ಲಿ 7 ಸಾವಿರಕ್ಕೂ ಹೆಚ್ಚು ಮಹಿಳೆಯರು ನಿತ್ಯವೂ 8 ಗಂಟೆಗಳ ಅವಧಿ ದುಡಿಯುತ್ತಾರೆ. ಟೇಲರ್‌, ಹೆಲ್ಪರ್‌, ಲೇಯರ್‌, ಪ್ಯಾಕರ್‌ ಸೇರಿ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಇಲ್ಲಿನ ಮಹಿಳಾ ಕಾರ್ಮಿಕರಿಗೆ ದೊರಕುವ ವೇತನ ಮಾತ್ರ ₹ 6– ₹ 8 ಸಾವಿರ ಮಾತ್ರ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕನಿಷ್ಠ ₹ 10,500 ವೇತನ ನೀಡುವಂತೆ ಆದೇಶಿಸಿತ್ತು. ಕಾರ್ಮಿಕರು ಅಷ್ಟು ವೇತನ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಅವಧಿ ಮುಗಿಯುತ್ತಿದ್ದಂತೆ ಕಾರ್ಖಾನೆಯವರು ನಿಗದಿತ ಕನಿಷ್ಠ ವೇತನ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಾರ್ಮಿಕರ ವೇತನದ ಹೆಚ್ಚಳದ ಕೂಗು, ಒತ್ತಡ ವ್ಯಾಪಕವಾಗುತ್ತಿದ್ದಂತೆ ಪ್ರತಿಭಟನೆಯನ್ನು ಹತ್ತಿಕ್ಕಲು ಆಡಳಿತ ಮಂಡಳಿ ಯತ್ನಿಸಿದೆ. ಈಗಾಗಲೇ ಜಿಲ್ಲಾ ಮೀಸಲು ಪಡೆಯ ಮೂರು ತುಕಡಿಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಸೋಮವಾರ ಕಾರ್ಖಾನೆಗೆ ಭೇಟಿ ನೀಡಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಇದೀಗ ನೂತನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಾರ್ಮೆಂಟ್‌ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡುವುದಾಗಿ ಭರವಸೆ ನೀಡಿರುವ ಕಾರಣ ಪ್ರತಿಭಟನೆಗೆ ತಾತ್ಕಾಲಿಕ ತಡೆ ಬಿದ್ದಿದೆ.

ADVERTISEMENT

‘ಈ ಕಾರ್ಖಾನೆಯಲ್ಲಿ 7 ಸಾವಿರ ಮಹಿಳಾ ಕಾರ್ಮಿಕರಿಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಶೌಚಾಲಯಕ್ಕೆ ಹೋಗಬೇಕಾದರೂ ಮೇಲ್ವಿಚಾರಕರ ಅನುಮತಿ ಪಡೆದೇ ಹೋಗಬೇಕಾಗಿದೆ. ಅಪಾಯಕಾರಿ ಕೆಲಸಗಳನ್ನು ಸುರಕ್ಷತಾ ಉಪಕರಣ ನೀಡದೇ ಮಾಡಿಸುತ್ತಾರೆ. ಅತಿ ಹೆಚ್ಚು ಉಷ್ಣಾಂಶದಿಂದ ನಾವು ಅನಾರೋಗ್ಯಕ್ಕೀಡಾಗುತ್ತಿದ್ದೇವೆ. ಸಂಬಳವೂ ಕಡಿಮೆ, ಸೌಲಭ್ಯವೂ ಇಲ್ಲ. ವಾಹನ ವ್ಯವಸ್ಥೆ ಇಲ್ಲದ ಕಾರಣ ಗೂಡ್ಸ್‌ ವಾಹನಗಳಲ್ಲಿ ದನಗಳಂತೆ ಪ್ರಯಾಣ ಮಾಡುತ್ತೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಕಾರ್ಮಿಕರೊಬ್ಬರು ನೋವು ತೋಡಿಕೊಂಡರು.

‘ನಿತ್ಯವೂ ಇಲ್ಲಿನ ಕಾರ್ಮಿಕರಿಗೆ ನಿಯಮ ಮೀರಿ ಉತ್ಪಾದನೆಯ ಗುರಿ ನೀಡಲಾಗುತ್ತದೆ. ಈ ಗುರಿಯನ್ನು ಮುಟ್ಟುವುದಕ್ಕಾಗಿ ಮಧ್ಯಾಹ್ನದ ಊಟ ಬಿಟ್ಟು ಹಸಿವಿನಲ್ಲಿಯೇ ಕೆಲಸ ಮಾಡುತ್ತೇವೆ. ಮೇಲ್ವಿಚಾರಕರ ಕಿರುಕುಳ, ಅವಾಚ್ಯ ಶಬ್ದಗಳ ನಿಂದನೆ, ಮಾನಸಿಕ ಹಿಂಸೆ ಇಲ್ಲಿ ಸಾಮಾನ್ಯ. ಇವೆಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡುವುದು ಅನಿವಾರ್ಯವಾಗಿದೆ. ನಮ್ಮ ಬಡತನವನ್ನು ಕಾರ್ಖಾನೆಯವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.