ADVERTISEMENT

`ಕಬ್ಬಿಗಿಂತ ರೈತರನ್ನೇ ಅರೆಯುವ ಕಾರ್ಖಾನೆ'

ಕೃಷಿ ಜಮೀನು ಸಂಬಂಧ: ಹೈಕೋರ್ಟ್ ಕಟು ಟೀಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 7:00 IST
Last Updated 2 ಜುಲೈ 2013, 7:00 IST

ಬೆಂಗಳೂರು: `ಕಾರ್ಖಾನೆ ಸ್ಥಾಪನೆಗೆ ಕೃಷಿ ಜಮೀನನ್ನು ಮನಸೋಇಚ್ಛೆ ನೀಡುವ ಪ್ರವೃತ್ತಿ ಸಲ್ಲದು. ಇದು ಮುಂದುವರಿದರೆ ಮುಂದೊಂದು ದಿನ ಕೃಷಿಗೆ ಜಮೀನು ಇಲ್ಲದಂತಹ ಸ್ಥಿತಿ ನಿರ್ಮಾಣ ಆಗಬಹುದು. ಜಮೀನು ಸ್ವಾಧೀನಕ್ಕೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯ ಇದೆ' ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.

ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಜಮೀನು ಸ್ವಾಧೀನ ಮಾಡಿಕೊಂಡು 15 ವರ್ಷ ಕಳೆದಿದೆ. ಆದರೆ, ಇದುವರೆಗೂ ಕಾರ್ಖಾನೆ ಸ್ಥಾಪನೆ ಆಗಿಲ್ಲ. ಜಮೀನು ವಾಪಸ್ ನೀಡಬೇಕು ಎಂದು ಕೋರಿ ನಾಗಮಂಗಲ ತಾಲ್ಲೂಕಿನ ಕಾಲಿಂಗನಹಳ್ಳಿಯ ಜಿ. ನಂಜಪ್ಪ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ                ಕೆ.ಎಲ್. ಮಂಜುನಾಥ್ ನೇತೃತ್ವದ ವಿಭಾಗೀಯ ಪೀಠ ಈ ಮಾತು ಹೇಳಿತು.

`ಇಂದಿನ ಸಕ್ಕರೆ ಕಾರ್ಖಾನೆಗಳು ಕಬ್ಬಿಗಿಂತ ಹೆಚ್ಚಾಗಿ ರೈತರನ್ನೇ ಅರೆಯುತ್ತಿರುವಂತಿದೆ. ಸರ್ಕಾರಗಳು ಕಾರ್ಖಾನೆ ಸ್ಥಾಪನೆಗೆ ಜಮೀನು ಸ್ವಾಧೀನ ಮಾಡಿಕೊಂಡು ಕೃಷಿ ಜಮೀನು ಹಾಳು ಮಾಡುತ್ತಿವೆ' ಎಂದು ಕಟುವಾಗಿ ಹೇಳಿದೆ. ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.