ADVERTISEMENT

ಕರ ನಿರಾಕರಣೆ ಕರೆ, ಕೆಆರ್‌ಎಸ್ ಚಲೋ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಪ್ರತಿಭಟನೆ ಮುಂದುವರೆದಿದ್ದರಿಂದ ಮಂಗಳವಾರವೂ ವಾಹನಗಳು ಸಂಚರಿಸಲಿಲ್ಲ. ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ಜೋರಾಗಿದ್ದು, ಕರ ನಿರಾಕರಣೆ ಚಳವಳಿ ಆರಂಭಿಸುವ ಮೂಲಕ ಹೋರಾಟ ಹೊಸ ರೂಪ ಪಡೆದುಕೊಂಡಿದೆ.

ಮದ್ದೂರು, ಗೆಜ್ಜಲಗೆರೆ, ಶ್ರೀರಂಗಪಟ್ಟಣದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆಯಲಾಯಿತು. ಗೆಜ್ಜಲಗೆರೆಯಲ್ಲಿ ರೈತ ನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ ಮಹಿಳೆಯರು ರಸ್ತೆಯಲ್ಲಿಯೇ ಗಾಂಧಿ ಜಯಂತಿ ಆಚರಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಿಲ್ಲ.

ಮಳವಳ್ಳಿ ತಾಲ್ಲೂಕಿನ ಕ್ಯಾತೇಗೌಡನದೊಡ್ಡಿ, ಮದ್ದೂರು ತಾಲ್ಲೂಕಿನ ಬೋರಾಪುರಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಮಳವಳ್ಳಿ ಮಾರ್ಗವಾಗಿ ಬೆಂಗಳೂರಿಗೆ  ತೆರಳುತ್ತಿದ್ದವರು ತೊಂದರೆ ಅನುಭವಿಸಬೇಕಾಯಿತು. 2 ಗಂಟೆ ಕಾಲ ರಸ್ತೆ ತಡೆಯ ನಂತರ ಸಂಚಾರ ಸುಗಮಗೊಂಡಿತು.

ಶ್ರೀರಂಗಪಟ್ಟಣ ತಾಲ್ಲೂಕಿನ ಕಪರನಕೊಪ್ಪಲು, ದರಸಗುಪ್ಪೆಯ ಗ್ರಾಮಸ್ಥರು ಶ್ರೀರಂಗಪಟ್ಟಣಕ್ಕೆ ಎತ್ತಿನಗಾಡಿಗಳಲ್ಲಿ ಬಂದು ಮಂಡ್ಯ-ಮೈಸೂರು ಹೆದ್ದಾರಿ ತಡೆ ನಡೆಸಿದರು. ನಗುವಿನಹಳ್ಳಿ, ಬೆಳಗೊಳಗಳಲ್ಲಿಯೂ ರಸ್ತೆ ತಡೆ ನಡೆಯಿತು.

ಕೆಆರ್‌ಎಸ್ (ಕೃಷ್ಣರಾಜಸಾಗರ) ಮುತ್ತಿಗೆ ಹಾಕುವ ಕುರಿತಂತೆ ಶ್ರೀರಂಗಪಟ್ಟಣ ತಾಲ್ಲೂಕಿನ ಹಳ್ಳಿಗಳಲ್ಲಿ ಡಂಗುರ ಸಾರಲಾಗಿದೆ. ಜತೆಗೆ ಜೈಲ್ ಭರೋಕ್ಕೂ ಸಿದ್ಧರಾಗಿ ಆಗಮಿಸುವಂತೆ ತಿಳಿಸಲಾಗಿದೆ.

ಕರ ನಿರಾಕರಣೆಗೆ ಕರೆ: ಕಾವೇರಿ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಧಿಸುವ ಎಲ್ಲ ತೆರಿಗೆಗಳನ್ನು ಸಾರ್ವಜನಿಕರು ತುಂಬಲು ನಿರಾಕರಿಸಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಕರೆ ನೀಡಿದರು. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ನೌಕರರರು ಲೇಖನಿ ಸ್ಥಗಿತಗೊಳಿಸಿ ರೈತರ ಚಳವಳಿಗೆ ಸಹಕರಿಸಬೇಕು. ಕೆಆರ್‌ಎಸ್ ಮುತ್ತಿಗೆಯಲ್ಲಿ ಪ್ರತಿ ಮನೆಯಿಂದ ಒಬ್ಬರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿಗೆ ನೀರು ಪೂರೈಕೆಗೆ ಅಡ್ಡಿ
ಮಾಜಿ ಶಾಸಕ ಮಧು ಜಿ.ಮಾದೇಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ನೀರು ಪೂರೈಸುವ ಮಳವಳ್ಳಿ ತಾಲ್ಲೂಕಿನ ತೊರಕಾಡನಹಳ್ಳಿಯಲ್ಲಿರುವ ಬೆಂಗಳೂರು ಜಲ ಮಂಡಳಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಯಾವುದೇ ಕಾರಣಕ್ಕೂ ಬೆಂಗಳೂರಿಗೆ ನೀರು ಹರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ, ಒಂದು ಗಂಟೆ ಆರು ಯಂತ್ರಗಳನ್ನು ಬಂದ್ ಮಾಡಲು ಒಪ್ಪಿಗೆ ಸೂಚಿಸಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.