ADVERTISEMENT

ಕಾನೂನು ಕಣ್ಣಿಗೆ ಮಣ್ಣೆರಚುವ ದಂಧೆ!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 10:15 IST
Last Updated 6 ಫೆಬ್ರುವರಿ 2011, 10:15 IST

ಹಲಗೂರು: ಪದೇ ಪದೇ ಚರ್ಚಿತವಾದರೂ ಕೊನೆಕಾಣದ ಅಕ್ರಮ ದಂಧೆ ಜಿಲ್ಲೆಯ ಮಟ್ಟಿಗೆ ಮರಳು ಸಾಗಣೆ. ಶಿಂಷಾ ಮತ್ತು ಭೀಮಾನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿದ್ದರೂ ಅಧಿಕಾರಿಗಳು ಜಾಣ ಮೌನ.ಮರಳು ದಂಧೆಯಿಂದಾಗಿ ಇಗ್ಗಲೂರು ಬ್ಯಾರೇಜು ಯೋಜನೆ, ಯತ್ತಂಬಾಡಿ ಸೇತುವೆ, ತೊರೆಕಾಡನಹಳ್ಳಿ-ಪುರದದೊಡ್ಡಿ ಸೇತುವೆಗೆ ತೊಂದರೆ ಎಂಬ ಕೂಗೂ ಇದೆ. ಶಿಂಷಾ ನದಿಯಿಂದ ಕೃಷಿಗೆ  ನೀರೋದಗಿಸುವ ಏತ ನೀರಾವರಿ ಯೋಜನೆಗಳಿಗೂ ಸಮಸ್ಯೆ ಅಗುತ್ತಿದೆ.

ತಾಳೆಹಳ್ಳ, ಪುರದದೊಡ್ಡಿ, ಟಿ.ಕೆ.ಹಳ್ಳಿ, ಸಾಗ್ಯ, ಅಂಕನಹಳ್ಳಿ, ಯತ್ತಂಬಾಡಿ, ಹುಸ್ಕೂರು, ಸಾಮಂದಿಪುರ, ದಡಮಹಳ್ಳಿ, ಮಾರಗೌಡನಹಳ್ಳಿ, ಹೆಗ್ಗೊಡ್ಲು ಇತರ ಹಳ್ಳಿಗಳಲ್ಲಿ ಮರಳು ತೆಗೆಯಲಾಗುತ್ತಿದೆ. ಮರಳು ಸಾಗಣೆ ಕೆಲವರಿಗೆ ಹಣದ ದಂಧೆಯಾಗಿ ಮಾರ್ಪಟ್ಟಿದೆ. ರೈತರು ಕೃಷಿಕೂಲಿಕಾರರ ಸಮಸ್ಯೆ ಎದುರಿಸಿದರೆ, ಹಳ್ಳಿ ನೆಮ್ಮದಿಗೂ ಭಂಗ ತರುತ್ತಿದೆ.. ಮುಖ್ಯವಾಗಿ, ಭೀಮಾನದಿಯಲ್ಲಿ ಮರಳು ತೆಗೆದು ನದಿಯ ಚಿತ್ರಣವೇ ಬದಲಾಗಿದೆ.

ಜೂಗನಹಳ್ಳಿ, ಕೊನ್ನಾಪುರ, ಹಲಗೂರು, ಬಾಳೆಹೊನ್ನಿಗ ಕಡೆ ಮರಳು ತೆಗೆದಿದ್ದು, ಜೂಗನಹಳ್ಳಿ-ವಡ್ಡರದೊಡ್ಡಿ ಮಾರ್ಗದಲ್ಲಿ ಸಂಗ್ರಹ ಮಾಡಲಾಗಿದೆ. ಕಟ್ಟುನಿಟ್ಟಿನ ಆದೇಶವಿದ್ದರೂ ನಡೆಯುತ್ತಿದೆ ಎಂಬುದೇ ವಿಶೇಷ.ಲೋಡ್‌ಗಟ್ಟಲೆ ಮರಳು ತೆಗೆದಿದ್ದರಿಂದಾಗಿ ನದಿಗಳ ರೂಪ ಬದಲಾಗಿದೆ. ಹೆಚ್ಚಾಗಿ, ಕಾಣುತ್ತಿವೆ. ಅಂತರಜಲ ಸಮಸ್ಯೆ, ಕೊರೆತ, ವ್ಯವಸಾಯಕ್ಕೆ ನೀರಿನ ತೊಂದರೆ ಉಂಟಾಗಿದೆ.

ಇಷ್ಟೆಲ್ಲದರ ನಡುವೆ, ಅಕ್ರಮವಾಗಿ ಮರಳು ತೆಗೆಯುವವರ ವಿರುದ್ಧ, ಮರಳು ಅಡ್ಡೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಹಳ್ಳಿ ಹಳ್ಳಿಗಳಲ್ಲಿ ಮರಳು ತೆಗೆಯುವುದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಮಾತ್ರ  ಕೇವಲ ಹೇಳಿಕೆಗಳಾಗಿಯೇ ಉಳಿದಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.