ADVERTISEMENT

ಕಾನ್‌ಸ್ಟೇಬಲ್ ವರ್ಗಾವಣೆ: ಪತ್ನಿ ಧರಣಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 6:10 IST
Last Updated 25 ಫೆಬ್ರುವರಿ 2012, 6:10 IST

ಶ್ರೀರಂಗಪಟ್ಟಣ: `ತನ್ನ ಗಂಡನನ್ನು ಸಕಾರಣ ಇಲ್ಲದೆ ಬೇರೆಡೆ ವರ್ಗಾವಣೆ ಮಾಡಿ ತೊಂದರೆ ನೀಡಲಾಗುತ್ತಿದೆ~ ಎಂದು ಆರೋಪಿಸಿ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿಯೊಬ್ಬರು ಶುಕ್ರವಾರ ಪಟ್ಟಣದ ಡಿವೈಎಸ್ಪಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು.

ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಪೇದೆ ರವಿಕುಮಾರ್ ಎಂಬುವರನ್ನು ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿಗೆ ವರ್ಗಾವಣೆ ಮಾಡಿ ಗುರುವಾರ ಆದೇಶ ಮಾಡಲಾಗಿದೆ. ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಈ ಕ್ರಮ ಜರುಗಿಸಿದ್ದಾರೆ.
 
ಏನೂ ತಪ್ಪು ಮಾಡದ ರವಿಕುಮಾರ್ ಅವರನ್ನು ವರ್ಗಾಯಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ರವಿಕುಮಾರ್ ಪತ್ನಿ ಎಸ್.ಬಿಂದು ತಮ್ಮ ಅಳಲು ತೋಡಿಕೊಂಡರು. ಈ ಅಕಾಲಿಕ ವರ್ಗಾವಣೆಯಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತದೆ ಎಂದು ಹೇಳಿದರು.

  ಸಾರ್ವಜನಿಕ ಹಿತರಕ್ಷಣಾ ಸಮಿತಿ ಮತ್ತು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಜತೆ ಧರಣಿ ನಡೆಸಿದ ಬಿಂದು ತಮ್ಮ ಪತಿಯ ವರ್ಗಾವಣೆ ಆದೇಶವನ್ನು ರದ್ದು ಮಾಡಬೇಕು ಎಂದು ಡಿವೈಎಸ್ಪಿ ಕಲಾ ಕೃಷ್ಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ರವಿಕುಮಾರ್ ವರ್ಗಾವಣೆ ಕುರಿತು ಮಾತನಾಡುವ ವೇಳೆ ಡಿವೈಎಸ್ಪಿ ಅಸಂಬದ್ಧ ಮಾತುಗಳನ್ನಾಡಿದರು ಎಂಬ ಹಿನ್ನೆಲೆಯಲ್ಲಿ ಮರಳಾಗಾಲ ಮಂಜುನಾಥ್, ಜಯರಾಂ ಇತರರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ಮಾಧ್ಯಮದವರ ಫೋಟೋ ತೆಗೆಯುತ್ತಿದ್ದ ಹುಚ್ಚಯ್ಯ ಎಂಬ ಪೊಲೀಸ್ ಪೇದೆಯ ವಿರುದ್ಧ ಮಾಧ್ಯಮದವರು ಅಸಹನೆ ವ್ಯಕ್ತಪಡಿಸಿದರಲ್ಲದೆ ಡಿವೈಎಸ್ಪಿಗೆ ಮೌಖಿಕ ದೂರು ನೀಡಿದರು. ಪೈ.ನರಸಿಂಹ, ರಘು, ಡಿ.ಎಂ.ರವಿ. ಗಂಜಾಂ ಪುಟ್ಟರಾಮು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.