ADVERTISEMENT

ಕಾರ್ಗಿಲ್: ಹುತಾತ್ಮ ಯೋಧರಿಗೆ ನಮನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 3:29 IST
Last Updated 9 ಜುಲೈ 2019, 3:29 IST
ಮಂಡ್ಯದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಯುದ್ಧ ಭೂಮಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಸೇನಾನಿಗಳಿಗೆ ನಗರದಲ್ಲಿ ಹಣತೆ, ಮೇಣದಬತ್ತಿ ಬೆಳಕಿನ ಗೌರವ ನಮನ ಸಲ್ಲಿಸಲಾಯಿತು.
ಮಂಡ್ಯದಲ್ಲಿ ಶುಕ್ರವಾರ ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಯುದ್ಧ ಭೂಮಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಸೇನಾನಿಗಳಿಗೆ ನಗರದಲ್ಲಿ ಹಣತೆ, ಮೇಣದಬತ್ತಿ ಬೆಳಕಿನ ಗೌರವ ನಮನ ಸಲ್ಲಿಸಲಾಯಿತು.   

ಮಂಡ್ಯ: ಕಾರ್ಗಿಲ್ ವಿಜಯೋತ್ಸವಕ್ಕೆ ಶುಕ್ರವಾರ 14 ವರ್ಷ ಗತಿಸಿತು. ಯುದ್ಧ ಭೂಮಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಸೇನಾನಿಗಳಿಗೆ ನಗರದಲ್ಲಿ ಹಣತೆ, ಮೊಂಬತ್ತಿ ಬೆಳಕಿನ ಗೌರವ ನಮನ ಸಲ್ಲಿಸಲಾಯಿತು.

ಕಲಾತಪಸ್ವಿ ಟ್ರಸ್ಟ್, ಜೀವಧಾರೆ ಟ್ರಸ್ಟ್, ಶ್ರೀ ಶಿವಶಕ್ತಿ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಧರ ಶೌರ್ಯ, ಸಾಹಸ, ದೇಶಪ್ರೇಮವನ್ನು ಸ್ಮರಿಸಲಾಯಿತು.

ಅಲಂಕೃತ ವೇದಿಕೆಯಲ್ಲಿ ಯೋಧರ ಸಂಕೇತವಾಗಿ ಇಡಲಾಗಿದ್ದ ಬಂದೂಕು-ಟೋಪಿಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಭವನದಲ್ಲಿ ಹಾಜರಿದ್ದ ದೇಶಪ್ರೇಮಿಗಳು ಮೊಂಬೆತ್ತಿಗಳನ್ನು ಬೆಳಗಿದರು.

ADVERTISEMENT

ಕಾರ್ಗಿಲ್ ವಿಜಯ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಈ ಸಂಘಟನೆಗಳು ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರರಚನೆ ಸ್ಪರ್ಧೆ ಆಯೋಜಿಸಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.

ಈಚೆಗೆ ಹುತಾತ್ಮರಾದ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಆಲಂಬಾಡಿ ಗ್ರಾಮದ ಸತೀಶ್ ಮತ್ತು ಅಗ್ರಹಾರ ಬಾಚಹಳ್ಳಿಯ ಜಯರಾಮೇಗೌಡ ಅವರ ಪರವಾಗಿ ಕುಟುಂಬ ಸದಸ್ಯರನ್ನು ಗೌರವಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಎಚ್.ಪಿ.ಮಂಜುಳಾ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ದೇಶಕ್ಕಾಗಿ ತಮ್ಮ ಪ್ರಾಣವನ್ನು ತೆತ್ತು ಹುತಾತ್ಮರಾಗುವ ವೀರ ಸೇನಾನಿಗಳ ಸೇವೆ ದೊಡ್ಡದು ಎಂದು ಗುಣಗಾನ ಮಾಡಿದರು.

ಪ್ರತಿ ಕ್ಷಣಕ್ಷಣವೂ ಮೃತ್ಯುವಿನ ದವಡೆಯಲ್ಲಿದ್ದು, ಆತಂಕದಲ್ಲೇ ಜೀವನ ನಡೆಸುವ, ನಮ್ಮ ಬದುಕನ್ನು ತಂಪಾಗಿ ಇಡುವ ಯೋಧರ ಸೇವೆ ಅನನ್ಯ. ಇದನ್ನು ಎಷ್ಟೇ ಬಣ್ಣಿಸಿದರೂ ಸಾಲದು ಎಂದು ಕೊಂಡಾಡಿದರು.

ಆರಂಭದಲ್ಲಿ `ವಂದೇ ಮಾತರಂ' ಗೀತೆಯನ್ನು ಗಾಯಕಿ ಕೆ.ಎಸ್.ಗಾನಶ್ರೀ ಅವರು ಧ್ವನಿಪೂರ್ಣವಾಗಿ ಹಾಡುವ ಮೂಲಕ ಸಮಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಯೋಧ ಕನ್ವರ್ ಸಿಂಗ್, ವಕೀಲ ವಿಶಾಲ್ ರಘು, ನಬಾರ್ಡ್ ಬ್ಯಾಂಕ್‌ನ ಮಹಾ ಪ್ರಬಂಧಕ ಬಿಂದುಮಾಧವ ವಡವಿ, ಟ್ರಸ್ಟ್‌ನ ಎಸ್.ಬಿ.ಅನಿಲ್‌ಕುಮಾರ್, ಡಾ. ಎಸ್.ಮುರಳಿ, ಶಂಕರೇಗೌಡ, ಎಸ್.ಸಿ.ನಿಂಗರಾಜು ಗೌಡ, ಎಸ್.ಎಂ.ನಟರಾಜು, ಎಸ್.ಎನ್.ನವೀನ್ ಸೇರಿದಂತೆ ಹಲವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.