ADVERTISEMENT

ಕಾಲುಬಾಯಿ ಜ್ವರ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 10:55 IST
Last Updated 13 ಸೆಪ್ಟೆಂಬರ್ 2013, 10:55 IST

ಪಾಂಡವಪುರ: ತಾಲ್ಲೂಕಿನ ಹಲವೆಡೆ ಕಾಲುಬಾಯಿ ಜ್ವರದಿಂದ ರಾಸುಗಳು ಸಾವನ್ನಪ್ಪುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೈತರಲ್ಲಿ ಆತಂಕ ಉಂಟಾಗುತ್ತಿದೆ.

ತಾಲ್ಲೂಕಿನ ಕೆನ್ನಾಳು, ಕನಗೋನ­ಹಳ್ಳಿ, ಗುಮ್ಮನಹಳ್ಳಿ ಸೇರಿದಂತೆ ಹಲ­ವು ಗ್ರಾಮಗಳಲ್ಲಿ ಹಸುಗಳು ಕಾಲು ಬಾಯಿಜ್ವರ ತಗುಲಿ ಸಾವನ್ನಪ್ಪುತ್ತಿವೆ. ಕೆನ್ನಾಳು ಗ್ರಾಮದಲ್ಲಿಯೇ ಸುಮಾರು 8ಕ್ಕೂ ಹೆಚ್ಚು ಹಸುಗಳು ಸಾವಿಗೀಡಾ­ಗಿವೆ. ಕನಗೋನಹಳ್ಳಿ, ಗುಮ್ಮನಹಳ್ಳ­ಯಲ್ಲಿ ಸುಮಾರು 4 ಹಸುಗಳು ಸಾವನ್ನಪ್ಪಿದ್ದರೆ ಶ್ಯಾದನಹಳ್ಳಿ­ಯಲ್ಲಿ ರೈತ ರಾಜೇಗೌಡ ಅವರ ಗರ್ಭಧರಿಸಿದ ಹಸು ಸಾವನ್ನಪಿರುವ ವರದಿಯಾಗಿದೆ.

ಕಾಲುಬಾಯಿ ಜ್ವರದ ‘ಓ’ ಮಾದರಿಯ ತೀವ್ರ ತೆರೆನಾದ ಬೇನೆಗೆ ‘ಎಚ್‌ಎಫ್’ ಹಾಗೂ ‘ಜರ್ಸಿ’ ತಳಿಯ ಸೀಮೆ ಹಸುಗಳು ಸೇರಿದಂತೆ ನಾಟಿ ಹೋರಿಗಳು, ಕುರಿಗಳೂ ಸಾವನ್ನಪ್ಪಿವೆ. ಉಳಿದಂತೆ 10ಕ್ಕೂ ಹೆಚ್ಚು ರಾಸುಗಳು ಜ್ವರದಿಂದ ನರಳುತ್ತಿರುವುದು ತಿಳಿದು ಬಂದಿದೆ. ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಈ ರೋಗ ಹರಡು ತ್ತಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ.

‘ರೋಗ ಅಂಟಿರುವ ರಾಸುಗಳ ಜೊಲ್ಲು, ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಕಾಲುಬಾಯಿಜ್ವರ ದೃಢ­ಪ­ಟ್ಟಿದೆ. ಆದರೆ ಬೇನೆಗೆ ಹಸುಗಳು ಸಾಯುತ್ತಿರುವುದು ಇದೇ ಮೊದಲು’ ಎಂದು ಕೆನ್ನಾಳು ಗ್ರಾಮಕ್ಕೆ ಭೇಟಿ ನೀಡಿ ರಾಸುಗಳ ತಪಾಸಣೆ ನಡೆಸಿದ ಪಶು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಕಾಲುಬಾಯಿ ಜ್ವರದ ಲಸಿಕೆ ಹಾಕಿಸದ ಹಸುಗಳು ಸಾವನ್ನಪ್ಪಿವೆ. ತಾಲ್ಲೂಕಿನ ಕೆನ್ನಾಳು ಗ್ರಾಮದಲ್ಲಿ ಕೇವಲ ಎರಡು ಹಸುಗಳು ಮಾತ್ರ ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿವೆ, ಉಳಿದ ಹಸುಗಳು ಬೇರೆ ಬೇರೆ ಕಾರಣಕ್ಕೆ ಸಾವನ್ನಪ್ಪಿವೆ. ಕಾಲುಬಾಯಿ ಜ್ವರಕ್ಕೆ ನಾಟಿ ಹಸು ಅಥವಾ ಎತ್ತುಗಳು ಸತ್ತಿರುವ ಬಗ್ಗೆ ಎಲ್ಲಿಯೂ ವರದಿ ಯಾಗಿಲ್ಲ’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಸಿ.ಪದ್ಮನಾಭ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸಾವಿರಾರು ರೂಪಾಯಿ ಬೆಲೆ ಬಾಳುವ ಹಸುಗಳು ಸಾಯುತ್ತಿರುವು­ದರಿಂದ ಪಶಪಾಲಕರು ಆತಂಕಗೊಂಡಿ­ದ್ದಾರೆ. ಪಶು ಇಲಾಖೆಯೇ ನೇರ ಹೊಣೆ­ಯಾಗಿದ್ದು, ಹಾಲು ಕರೆಯುವ ಹಸುಗಳನ್ನೇ ನೆಚ್ಚಿ ಗೊಂಡಿದ್ದವರಿಗೆ ನಷ್ಟವಾಗಿದ್ದು, ಪಶು ಇಲಾಖೆ­ಯೇ ನಷ್ಟವನ್ನು ಭರಿಸಬೇಕೆಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಅಧಿಕಾರಿಗಳ ಭೇಟಿ, ತಪಾಸಣೆ: ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಸಿ.­ಪದ್ಮನಾಭ್, ಚಿನಕುರಳಿ ಪಶು ಚಿಕಿತ್ಸಾಲಯದ ಸಹಾಯಕ ನಿರ್ದೇಶಕ ಡಾ.ಕೋಡಂಡರಾಮ್, ಪಿಎಸ್‌ಎಸ್‌ಕೆ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದ ಪಶು ವೈದ್ಯಾಧಿಕಾರಿ ಡಾ.ಯಶೋದಾ ಮತ್ತು ಸಿಬ್ಬಂದಿ ತಾಲ್ಲೂಕಿನ ಕೆನ್ನಾಳು, ಗುಮ್ಮನಹಳ್ಳಿ, ಕನಗೋನಹಳ್ಳಿ ಹಾಗೂ ಇನ್ನಿತರ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ್ದರು. ಕಾಲುಬಾಯಿ ಜ್ವರದಿಂದ ನರಳುತ್ತಿರುವ ರಾಸುಗಳನ್ನು ತಪಾಸಣೆ ನಡೆಸಿದರಲ್ಲದೆ, ಜ್ವರದಿಂದ ಸಾವನ್ನಪ್ಪಿ ರುವ ರಾಸುಗಳ ರೈತರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.