ADVERTISEMENT

ಕುಪ್ಪಳ್ಳಿ ಪರಿಸರವೇ ನಂದನವನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 7:15 IST
Last Updated 24 ಆಗಸ್ಟ್ 2011, 7:15 IST

ಪಾಂಡವಪುರ: ಒಮ್ಮೆಯಾದರು ಕವಿ ಶೈಲಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್.ಕೆಂಪೂಗೌಡ ಶಿಕ್ಷಕರಿಗೆ ಸೂಚನೆ ನೀಡಿದರು.ಪಟ್ಟಣದ ಪಿಇಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ರಾಷ್ಟ್ರ ಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ, ವಾರ್ತಾ ಮತ್ತು ಪ್ರಚಾರ ಇಲಾಖೆ ಮಂಡ್ಯದ ಸಂಯುಕ್ತ ಆಶ್ರಯದಲ್ಲಿ ನಡೆದ `ಕುವೆಂಪು ಸಾಹಿತ್ಯ ಪ್ರಚಾರ ರಥದ ತಿರುಗಾಟ, ಕುವೆಂಪು,-ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಶಿಕ್ಷಕರು ರಾಷ್ಟ್ರ ಕವಿ ಕುವೆಂಪು ಅವರ ಕುಪ್ಪಳ್ಳಿಯ ಕವಿ ಶೈಲಕ್ಕೆ ಕರೆದುಕೊಂಡು ಹೋಗಬೇಕು. ಅದೊಂದು ನಂದನವನ. ವಿದ್ಯಾರ್ಥಿಗಳು ಅಲ್ಲಿಯ ಪರಿಸರದ ಪ್ರಭಾವಕ್ಕೆ ಒಳಗಾಗಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವ ಸಾಧ್ಯತೆಯಿದೆ.

ಕವಿ ಶೈಲದ ನಿಸರ್ಗ, ದಟ್ಟನೆಯ ಬೆಟ್ಟ ಗುಡ್ಡಗಳ ಮೇಲೆ ಬೀಳುವ ಮುಂಜಾನೆಯ ಮಂಜುಗಳು ಎಂತಹವರನ್ನು ವಿಸ್ಮಿತರಾಗಿ ಮಾಡಿಬಿಡುತ್ತದೆ ಎಂದರು.

ಪ.ಪಂ. ಅಧ್ಯಕ್ಷ ಎಸ್.ಸಿದ್ದೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಇಓ ಸ್ವಾಮಿ ಉದ್ಘಾಟಿಸಿದರು. ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿದರು. ಪ.ಪಂ. ಉಪಾಧ್ಯಕ್ಷ ಶಿವಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್,

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಜಾನಪದ ಪರಿಷತ್ತಿನ ಅಧ್ಯಕ್ಷ ಎಸ್. ಎಂ.ರಮೇಶ್, ಉಪಾಧ್ಯಕ್ಷ ಎಚ್.ರಮೇಶ್, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ಶಿಕ್ಷಣ ಸಂಯೋಜಕಿ ಡಾ.ಪ್ರತಿಮಾ, ಕೃಷಿ ಅಧಿಕಾರಿ ಮಹದೇವಯ್ಯ, ಅಧಿಕಾರಿಗಳಾದ ಪ್ರಭಾಕರ್ ಕೊಪ್ಪದ್, ರಾಮಚಂದ್ರ, ಕರಾದಸಂಸ ಮುಖಂಡರಾದ ದೇವರಾಜು, ಶ್ರಿನಿವಾಸ ಉಪಸ್ಥಿತರಿದ್ದರು. ಇದಕ್ಕೂ ಮೊದಲು ತಾಲ್ಲೂಕಿನ ಜಕ್ಕನಹಳ್ಳಿ, ಮೇಲುಕೋಟೆ, ಚಿನಕುರಳಿ ಗ್ರಾಮಗಳಲ್ಲಿ ಕುವೆಂಪು ಸಾಹಿತ್ಯ ಪ್ರಚಾರ ರಥ ಸಂಚರಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.