ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಕೃಷ್ಣರಾಜ ಸಾಗರ (ಕೆಆರ್‌ಎಸ್)ಜಲಾಶಯದ ನೀರಿನ ಮಟ್ಟ ಭಾನುವಾರ ಸಂಜೆ ವೇಳೆಗೆ 88.23 ಅಡಿಗೆ ಇಳಿದಿದೆ.
ಬಲದಂಡೆ (ಆರ್‌ಬಿಎಲ್‌ಎಲ್) ನಾಲೆ ಹೊರತು ಪಡಿಸಿ ಜಲಾಶಯದ ಇತರ ನಾಲೆಗಳಿಗೆ ನೀರಿನ ಹರಿವು ನಿಲ್ಲಿಸಲಾಗಿದೆ. ಜಲಾಶಯಕ್ಕೆ 957 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬಲದಂಡೆ ನಾಲೆಯ ಮೂಲಕ 250 ಕ್ಯೂಸೆಕ್ ನೀರು ಹೊರ ಹರಿಯುತ್ತಿದೆ.
ನದಿಯ ಒಡ್ಡುಗಳ ಮೂಲಕ ಹರಿಯುವ ವಿರಿಜಾ ಮತ್ತು ದೇವರಾಯ ನಾಲೆಗಳಲ್ಲಿ ನೀರನ್ನು ಹರಿಯಬಿಡಲಾಗಿದೆ. ಜಲಾಶಯದ ನಾಲೆಗಳಲ್ಲಿ ಕಟ್ಟು ಪದ್ಧತಿ ಪ್ರಕಾರ ನೀರು ಹರಿಸಲಾಗುತ್ತಿದೆ. 20 ದಿನಗಳ ಕಾಲ ಹರಿಯಬಿಟ್ಟು 10 ದಿನ ನೀರು ನಿಲ್ಲಿಸಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಇತರ ನಾಲೆಗಳಿಗೆ ಇನ್ನೂ ಒಂದು ವಾರ ನೀರು ಹರಿಸುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಜಲಾಶಯ 78 ಅಡಿ ತಲುಪುವ (ಡೆಡ್ ಸ್ಟೋರೇಜ್) ವರೆಗೆ ಮಾತ್ರ ನಾಲೆಗಳಿಗೆ ನೀರು ಹರಿಸಬಹುದು. ಜಲಾಶಯದ ಈಗಿನ ನೀರಿನ ಪ್ರಮಾಣದಂತೆ ಕೇವಲ ಒಂದು ಕಟ್ಟು ಮಾತ್ರ ನೀರು ಕೊಡಬಹುದು. ನಂತರ ನಾಲೆಗಳಿಗೆ ನೀರು ಹರಿಸಲು ಸಾಧ್ಯ ಆಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 102 ಅಡಿ ನೀರು ಸಂಗ್ರಹ ಇತ್ತು. 1120 ಕ್ಯೂಸೆಕ್ ಒಳ ಹರಿವು ಇದ್ದು, 3089 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.