ADVERTISEMENT

ಕೇಂದ್ರದ ಗಮನ ಸೆಳೆಯುವಲ್ಲಿ ಸಂಸದರು ವಿಫಲ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 9:35 IST
Last Updated 12 ಮಾರ್ಚ್ 2011, 9:35 IST

ಮಂಡ್ಯ: ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸುತ್ತಾ ಇದ್ದರೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೇರಿದಂತೆ ರಾಜ್ಯದ ಸಂಸದರು ಈ ಕುರಿತು ಕೇಂದ್ರ ಸರ್ಕಾರದ ಗಮನಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಶುಕ್ರವಾರ ಟೀಕಿಸಿದರು. ಬೆಲೆ ಕುಸಿತದ  ಪರಿಣಾಮ ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಉಲ್ಲೇಖಿಸಿ ಅವರ ಹಿತ ಕಾಪಾಡುವ ಪ್ರಯತ್ನವನ್ನೇ ನಡೆಸಲಿಲ್ಲ. ಸಮಸ್ಯೆ ಇಷ್ಟು ಗಂಭೀರ ಆಗಿದ್ದರೂ ಈ ಬಗ್ಗೆ ಸಂಸದರ ನಿರ್ಲಕ್ಷ್ಯ ಖಂಡನೀಯ ಎಂದು ಸುದ್ದಿಗೋಷ್ಠಿ ಯಲ್ಲಿ ಟೀಕಿಸಿದರು.

ರೇಷ್ಮೆ ಬೆಲೆ ಕುಸಿತ, ಬೆಂಬಲ ಬೆಲೆ, ಆಮದು ನೀತಿ ಕುರಿತಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಈಚೆಗೆ ರೈತ ಸಂಘದ ನಿಯೋಗ ದೆಹಲಿಗೆ ತೆರಳಿದ್ದು, ರಾಜ್ಯದವರೇ ಆದ ವಿದೇಶಾಂಗ ಖಾತೆ ಸಚಿವ ಎಸ್.ಎಂ.ಕೃಷ್ಣ, ಕಾನೂನು ಸಚಿವ ವೀರಪ್ಪಮೊಯ್ಲಿ ಅವರಿಗೂ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿರುವುದಾಗಿ ಹೇಳಿದರು. ಪ್ರಧಾನಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ದೊರೆತಿದೆ. ನಾವು ಸಕಾರಾತ್ಮಕ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಆಶಿಸಿದರು.

ಅಮಾನವೀಯ: ರೇಷ್ಮೆ ಬೆಲೆ ಕುಸಿತದಿಂದ ಘಾಸಿಗೊಂಡು ಆತ್ಮಹತ್ಯೆಗೆ ಶರಣಾದ ವಳಗೆರೆ ದೊಡ್ಡಿಯ ರೈತ ದಂಪತಿ ಕುಟುಂಬಕ್ಕೆ ಆರ್‌ಟಿಸಿ ಇಲ್ಲ ಎಂದು ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕಿದೆ ಎಂದು ಬಹಿರಂಗಪಡಿಸಿದರು. ಇಂಥ ಧೋರಣೆ ಅಮಾನವೀಯ. ಸರ್ಕಾರ, ಜಿಲ್ಲಾಡಳಿತ ಇನ್ನಾದರೂ ಪರಿಸ್ಥಿತಿ ಪರಿಶೀಲಿಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಅವ್ಯವಸ್ಥೆ: ವಿದ್ಯುತ್ ಪೂರೈಕೆಯ ಅವ್ಯವಸ್ಥೆಯನ್ನು ಉಲ್ಲೇಖಿಸಿ  ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳದೇ ಇದ್ದರೆ, ರೈತ ಸಂಘ ಬೆಂಗಳೂರಿನ ಕಾವೇರಿ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದೆ ಎಂದು ಎಚ್ಚರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.