ADVERTISEMENT

ಕ್ಯಾತನಹಳ್ಳಿ ಗ್ರಾಪಂಗೆ ನೈರ್ಮಲ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 6:45 IST
Last Updated 5 ಜನವರಿ 2012, 6:45 IST

ಪಾಂಡವಪುರ: ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಗೆ 2010-11ನೇ ಸಾಲಿನ `ನೈರ್ಮಲ್ಯ~ ಪ್ರಶಸ್ತಿಯನ್ನು ಪ್ರದಾನ ಮಾಡಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ತಿಳಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಸ್ವಚ್ಛತೆ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಗುರುತಿಸಿದ ಪಂಚಾಯತ್ ರಾಜ್ ಇಲಾಖೆ ಈ ಪ್ರಶಸ್ತಿಯನ್ನು ನೀಡಿದೆ. ಗ್ರಾಮದಲ್ಲಿ ರಸ್ತೆ, ಚರಂಡಿಗಳನ್ನು ಸ್ವಚ್ಛವಾಗಿ ಇಡಲಾಗಿದೆ. ಶೌಚಾಲಯ ನಿರ್ಮಿಸಿ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂದರು.

ಗ್ರಾಮದ ಪ್ರತಿಯೊಬ್ಬರೂ ನೈರ್ಮಲ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಶ್ರಮ, ಸಹಕಾರದಿಂದಾಗಿಯೇ ಈ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ಯಾವುದೇ ಯೋಜನೆ ಕಾರ್ಯಗತ ವಾಗಬೇಕಾದರೆ ಸಮುದಾಯದ ಸಹಭಾಗಿತ್ವವೇ ಮುಖ್ಯ. ಜತೆಗೆ ಹಿರಿಯ ಮುಖಂಡರ, ಯುವಜನತೆಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಅತ್ಯಗತ್ಯವಾಗಿ ಬೇಕಾಗಿದೆ. ಗ್ರಾಮಗಳು ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಯಾವ ರೋಗ ರುಜಿನಗಳು ತಲೆದೋರುವುದಿಲ್ಲ.ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಕೆ.ಗೌಡೇಗೌಡ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಮೇಶ್, ಸದಸ್ಯರಾದ ನಾರಾಯಣ್, ರತ್ನಮ್ಮ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಟಿ.ಮಂಜುನಾಥ್, ಮುಖಂಡರಾದ ರವಿ, ಮುರಳಿ, ಪ್ರಸಾದ್, ಉಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.