ADVERTISEMENT

ಗಣಿಗಾರಿಕೆ ರಾಷ್ಟ್ರೀಕರಣಕ್ಕೆ ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 9:50 IST
Last Updated 23 ಸೆಪ್ಟೆಂಬರ್ 2011, 9:50 IST

ಮಂಡ್ಯ: ಭ್ರಷ್ಟಾಚಾರದ ಮೂಲಕ ರಾಜಕಾರಣಿಗಳು ಸಂಪಾದಿಸಿರುವ ಹಣ ಮುಟ್ಟುಗೋಲು ಹಾಕಿಕೊಳ್ಳಬೇಕು, ಲೋಕಾಯುಕ್ತ ವರದಿ ಆಧರಿಸಿ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಪಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದರು.

ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಜಿಲ್ಲಾ ಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು ಅವರ ನೇತೃತ್ವದಲ್ಲಿ ಧರಣಿ ಪ್ರತಿಭಟನೆ ನಡೆಸಿದ ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಗಣಿಗಾರಿಕೆ ರಾಷ್ಟ್ರೀಕರಣ ಗೊಳಿಸಬೆಕು ಎಂದು ಆಗ್ರಹಪಡಿಸಿದರು.

ಇದೇ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲೆಯ ವಿವಿಧೆಡೆಯೂ ರೈತ ಸಂಘಟನೆ, ಹಸಿರುಸೇನೆಯ ಕಾರ್ಯಕರ್ತರು ಧರಣಿ ಪ್ರತಿಭಟನೆ ನಡೆಸಿದ್ದಾರೆ. ಭ್ರಷ್ಟಚಾರದ ಮೂಲಕ ಸಂಗ್ರಹಿಸಿರುವ ಹಣವನ್ನು ಇವರು ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ವಾಪಸು ತಂದು ದೇಶದ ಅಭಿವೃದ್ಧಿಗೆ ಬಳಸಬೇಕಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದು ಅಗತ್ಯವಾಗಿದೆ ಎಂದರು.

ಭ್ರಷ್ಟಾಚಾರ ವ್ಯವಸ್ಥೆಯನ್ನು ತಡೆಯುವ ನಿಟ್ಟಿನಲ್ಲಿ  ಲೋಕಾಯುಕ್ತ ವ್ಯವಸ್ಥೆಗೆ ಇನ್ನಷ್ಟು ಅಧಿಕಾರವನ್ನು ನೀಡುವ ಮೂಲಕ ಬಲಪಡಿಸಬೇಕಾಗಿದೆ. ಅಲ್ಲದೆ, ಅಕ್ರಮ ಗಣಿಗಾರಿಕೆ ಕುರತು ಲೋಕಾಯುಕ್ತ ನೀಡಿರುವ ವರದಿ ಆಧರಿಸಿ ತಪ್ಪಿತಸ್ಥರ ಮೇಲೆ ಶಿಸ್ತುಕ್ರಮ ಜರುಗಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುರೇಶ್, ಮರಿಚನ್ನೇಗೌಡ, ಬೊಮ್ಮೇಗೌಡ,  ಬಳ್ಳಾರಿ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಳವಳ್ಳಿ ವರದಿ: ನೈಸರ್ಗಿಕ ಸಂಪತ್ತು ಲೂಟಿ ಪ್ರಕರಣದಲ್ಲಿ ಸಿಲುಕಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಶಿಕ್ಷಿಸಬೇಕು ಹಾಗೂ ಗಣಿಗಾರಿಕೆ ರಾಷ್ಟ್ರೀಕರಣಗೊಳಿಸುವಂತೆ ಒತ್ತಾಯಿಸಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ವತಿಯಿಂದ ಧರಣಿ ನಡೆಸಲಾಯಿತು.

ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ನೀಡಿದ ವರದಿ ಅನ್ವಯ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಲೂಟಿಕೋರರಿಗೆ ತಕ್ಕ ಶಾಸ್ತಿ ಮಾಡಬೇಕು. ತಾಲ್ಲೂಕಿನ ಕಾವೇರಿ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಒಂದೇ ರಾತ್ರಿ 40ಕ್ಕೂ ಹೆಚ್ಚು ಲಾರಿ ವಶಕ್ಕೆ ಪಡೆದಿರುವುದು ಅಕ್ರಮ ಮರಳು ಲೂಟಿಗೆ ಸಾಬೀತು ಮಾಡಿದೆ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್. ದೇವರಾಜು, ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಉಪಾಧ್ಯಕ್ಷ ಎಳೇಗೌಡ, ಖಜಾಂಚಿ ಸಿದ್ದೇಗೌಡ, ಮರಿಗೌಡ, ಚಿಕ್ಕಿರಯ್ಯ, ನವ ಕರ್ನಾಟಕ ಯುವಶಕ್ತಿ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಕೆ. ಕುಮಾರ್ ಇತರರು ಇದ್ದರು.

ನಾಗಮಂಗಲ ವರದಿ: ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳು, ಅಧಿಕಾರಿ ಗಳಿಗೆ ಶಿಕ್ಷೆ ಆಗಬೇಕು ಹಾಗೂ ಗಣಿಗಾರಿಕೆ ರಾಷ್ಟ್ರೀಕರಣ ವಾಗಬೇಕು ಎಂದು ಒತ್ತಾಯಿಸಿ ಇಲ್ಲಿನ ಮಿನಿ ವಿಧಾನ ಸೌಧ ಮುಂಭಾಗ ರಾಜ್ಯ ರೈತ ಸಂಘದ ಹಾಗು ಹಸಿರು ಸೇನೆ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮಿನಿ ವಿಧಾನಸೌಧದ ಬಾಗಿಲಿಗೆ ಬ್ಯಾನರ್ ಕಟ್ಟಿ ಪ್ರತಿಭಟಿಸಿದರು. ಕಾಯಕವೇ ಕೈಲಾಸ ಎಂದು ಕೆಲಸ ಮಾಡಬೇಕಾದ ಜನಪ್ರತಿನಿಧಿಗಳು ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಅಂತಹ ಭ್ರಷ್ಟರ ಮುಂದೆ ಕೈ ಚಾಚದೆ ಸ್ವಾಭಿಮಾನದಿಂದ ಬದುಕುವ ದಾರಿ ಹುಡುಕಲು ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಕಾಲ ಸನ್ನಿಹಿತವಾಗಿದೆ ಎಂದು ರೈತ ಮುಖಂಡರು ಅಭಿಪ್ರಾಯಪಟ್ಟರು.

ಅಕ್ರಮ ಗಣಿಗಾರಿಕೆಗೆ ಕಾರಣರಾದ ಮಾಜಿ ಮುಖ್ಯ ಮಂತ್ರಿಗಳು, ಜನಪ್ರತಿನಿಧಿಗಳು, 700ಕ್ಕೂ ಹೆಚ್ಚು ಸರ್ಕಾರಿ ನೌಕರರಿಂದ ಸರ್ಕಾರಕ್ಕೆ ಉಂಟಾದ ನಷ್ಟ ವಸೂಲಿ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಹಾಗೂ ಗಣಿಗಾರಿಕೆ ರಾಷ್ಟ್ರೀಕರಣಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ರಾಜಕಾರಣಿಗಳು ವಿದೇಶಿ ಬ್ಯಾಂಕ್‌ನಲ್ಲಿ ಇಟ್ಟಿರುವ ಹಣ ವಾಪಸ್ ತರಿಸಿಕೊಳ್ಳಬೇಕು. ಅದನ್ನು ರಾಜ್ಯದ ಅಭಿವೃದ್ಧಿಗೆ ಬಳಸಬೇಕು. ರಸಗೊಬ್ಬರ ಮತ್ತು ತೈಲ ದರ ಇಳಿಸಬೆಕು. ನೈಸರ್ಗಿಕ ಸಂಪತ್ತಿನ ಲೂಟಿ, ಡಿನೋಟಿಫಿಕೇಷನ್ ಹೆಸರಿನಲ್ಲಿ ಭೂದಂಧೆಯಲ್ಲಿ ತೊಡಗಿದ ಭೂಗಳ್ಳರನ್ನು ಜೈಲಿಗೆ ಕಳಿಸುತ್ತಿರುವ ನ್ಯಾಯಾಂಗ ಕ್ರಮವನ್ನು ಪ್ರತಿಭಟನಾಕಾರರು ಸ್ವಾಗತಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ನಂಜುಂಡಯ್ಯ, ಕಾರ್ಯದರ್ಶಿ ಶಿವಲಿಂಗಯ್ಯ, ಗೌರವಾಧ್ಯಕ್ಷ ನಾಗರಾಜು, ರೈತ ಮುಖಂಡ ದೇವಲಾಪುರ ಚಂದ್ರಶೇಖರ್ ಇತರರು ಇದ್ದರು.

ಪಾಂಡವಪುರ ವರದಿ: ತಾಲ್ಲೂಕಿನಲ್ಲಿ ನಡೆಯುತ್ತಿರುವ ನೈಸರ್ಗಿಕ ಸಂಪತ್ತಿನ ಲೂಟಿ ತಡೆಯುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನಾ ಧರಣಿ ನಡೆಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಬೆಳಿಗ್ಗೆ 11-30ರಲ್ಲಿ ಜಮಾಯಿಸಿದ ಕಾರ್ಯಕರ್ತರು ಕೆಲವು ರಾಜಕಾರಣಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಮಾತ ನಾಡಿ, ಬೇಬಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಆದರೂ ಅಧಿಕಾರಿಗಳು ಮೌನವಾಗಿದ್ದಾರೆ. ಸರ್ಕಾರ ಕೂಡಲೇ ಸಿಬಿಐ ತನಿಖೆ ನಡೆಸಿ ಲೂಟಿಕೋರರನ್ನು ಬಂಧಿಸಬೇಕು ಹಾಗೂ ನೈಸರ್ಗಿಕ ಸಂಪತ್ತು ಕಾಪಾಡಬೇಕು ಎಂದರು.

ಗಣಿ ಸ್ಫೋಟದಿಂದ ಕಾವೇರಿ ನದಿ ಪಾತ್ರದ ಜನರಿಗೆ ತೊಂದರೆಯಾತ್ತಿದೆ. ತಕ್ಷಣ ಇದನ್ನು ನಿಲ್ಲಿಸಿಬೇಕು. ಕೆಲವು ರಾಜಕಾರಣಿಗಳು ತಲತಲಾಂತರದಿಂದ ಸರ್ಕಾರ ದಿಂದ ಅನುಮತಿ ಪಡೆದು ಗಣಿಗಾರಿಕೆ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಿರಂತರವಾಗಿ ಸಂಪತ್ತು ಲೂಟಿ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಜಿ.ಪಂ. ಸದಸ್ಯ ಎ.ಎಲ್. ಕೆಂಪೂಗೌಡ, ತಾ.ಪಂ. ಅಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯ ಕೆ. ಗೌಡೇಗೌಡ, ರೈತ ಸಂಘದ ಆಧ್ಯಕ್ಷ ಹರವು ಪ್ರಕಾಶ್, ಕಾರ್ಯದರ್ಶಿ ಅಮೃತಿ ರಾಜಶೇಖರ್, ಸಂಘಟನಾ ಕಾರ್ಯದರ್ಶಿ ಬಿ.ಟಿ. ಮಂಜುನಾಥ್, ಖಜಾಂಚಿ ಹೊಸಕೋಟೆ ರಾಮೇಗೌಡ, ಮುಖಂಡರಾದ ಎಚ್.ಎನ್. ವಿಜಯಕುಮಾರ್, ದಯಾನಂದ, ಕೆನ್ನಾಳು ವಿಜಯಕುಮಾರ್ ಇತರರು ಇದ್ದರು.

ಮದ್ದೂರು ವರದಿ: ಗಣಿಗಾರಿಕೆ ರಾಷ್ಟ್ರೀಕರಣ ಗೊಳಿಸಲು ಆಗ್ರಹಿಸಿ ಹಾಗೂ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಬೆಳಿಗ್ಗೆ 10ಗಂಟೆಗೆ ತಾಲ್ಲೂಕು ಕಚೇರಿಯ ಮುಖ್ಯದ್ವಾರ ಮುಚ್ಚಿ ಧರಣಿ ಆರಂಭಿಸಿದರು. ಮಧ್ಯಾಹ್ನ ಕಚೇರಿ ಆವರಣದಲ್ಲಿಯೇ ಅಡುಗೆ ಸಿದ್ಧಪಡಿಸಿ ಪಂಕ್ತಿ ಭೋಜನ ಸ್ವೀಕರಿಸಿದರು. ಸಂಜೆ 5ಗಂಟೆ ವೇಳೆಗೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಅಶೋಕ್ ಮಾತನಾಡಿ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯ ಮೂಲಕ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಡಿನೋಟಿಫೈ ದಂಧೆ ಮೂಲಕ ರಾಜಕಾರಣಿಗಳು ರೈತರ ಜಮೀನು ಕಬಳಿಸುತ್ತ್ದ್ದಿದಾರೆ. ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈಜೋಡಿಸಿ ಅಕ್ರಮ ಬಂಡವಾ ಳದ ಮೂಲಕ ಉದ್ಯಮಗಳನ್ನು ಆರಂಭಿಸಿ ಲಾಭ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಕೂಡಲೇ ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಆಗ್ರಹಪಡಿಸಿದರು.

ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ರಾಜಕಾರಣಿ ಗಳು ಹಾಗೂ ಅಧಿಕಾರಿಗಳು ಕಪ್ಪು ಹಣವನ್ನು ಸ್ವಿಸ್ ಬ್ಯಾಂಕುಗಳಲ್ಲಿ ಮುಚ್ಚಿಟ್ಟಿದ್ದಾರೆ. ಕೂಡಲೇ ಆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ರಾಜ್ಯ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಈಗಾಗಲೇ ಅಕ್ರಮ ಗಣಿಗಾರಿಕೆ ಕುರಿತು ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಅವರು ನೀಡಿರುವ ವರದಿಯನ್ವಯ ಭ್ರಷ್ಟ ರಾಜಕಾರಣಿಗಳನ್ನು ಜೈಲಿಗಟ್ಟಬೇಕು ಎಂದು ಅವರು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಜಿ.ಅಶೋಕ್, ನಾಗರಾಜು, ಎಂ.ಗಣೇಶ್, ಬೋರಾಪುರ ಶಂಕರೇ ಗೌಡ, ರಾಂಪುರ ವೆಂಕಟಪ್ಪ, ದಯಾನಂದ, ಅಪ್ಪಾಜಿ, ಕೆಂಪೇಗೌಡ, ಸೀತರಾಮು ಸೇರಿದಂತೆ ನೂರಾರು ರೈತ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕೃಷ್ಣರಾಜಪೇಟೆ ವರದಿ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಹಿಳಾ ಸಂಘಗಳ ಪ್ರತಿನಿಧಿಗಳು ಹಾಗೂ ರೈತಸಂಘದ ಮುಖಂಡರು ಪಟ್ಟಣದ ಮಿನಿವಿಧಾನಸೌಧದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಅವೈಜ್ಞಾನಿಕ ರಸಗೊಬ್ಬರ ನೀತಿ ಬದಲಾಯಿಸಬೇಕು. ನ್ಯಾ. ಸಂತೋಷ್ ಹೆಗ್ಡೆಯವರ ಗಣಿ ಹಗರಣಗಳ ಕುರಿತ ವರದಿಯನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಬೇಕು. ಜನಲೋಕಪಾಲ್ ವರದಿ ಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಕಬ್ಬಿಗೆ ವೈಜ್ಞಾನಿಕವಾದ ಬೆಲೆಯನ್ನು ನಿಗದಿಪಡಿಸಬೇಕು. ಹೇಮಾವತಿ ಜಲಾಶಯದಿಂದ ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸಬೇಕು ಎಂಬುದು ರೈತರ ಬೇಡಿಕೆಗಳಾಗಿತ್ತು.

ಮಹಿಳಾ ಸಂಘಟನೆಗಳು: ಅಡುಗೆ ಅನಿಲದ ಸಂಪರ್ಕ ಹೊಂದಿರುವ ಕುಟುಂಬಗಳಿಗೆ ಪಡಿತರ ಸೀಮೆ ಎಣ್ಣೆ ನೀಡದೆ ಇರುವುದು ಸರಿಯಲ್ಲ. ವಿದ್ಯುತ್ ಸಂಪರ್ಕ ಕಡಿತಗೊಂಡಾಗ, ಮನೆಗೆಲಸಕ್ಕೆ ಮತ್ತು ಮಕ್ಕಳು ಓದಿಕೊಳ್ಳಲು ಬೆಳಕಿನ ಅಗತ್ಯವಿದ್ದು, ಕನಿಷ್ಠ ಪ್ರಮಾಣದ ಸೀಮೆಎಣ್ಣೆಯನ್ನಾದರೂ ನೀಡಬೇಕು. ಹಲವು ತಿಂಗಳಿಂದ ಸ್ಥಗಿತಗೊಂಡಿರುವ ವೃದ್ದಾಪ್ಯ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೂಡಲೇ ವಿತರಿಸಬೇಕು ಮತ್ತಿತರ ಬೇಡಿಕೆಗಳನ್ನು ಮಹಿಳಾ ಸಂಘಟನೆಗಳು ಇಟ್ಟುಕೊಂಡು ಪ್ರತಿಭಟನೆ ನಡೆಸಿದವು.

ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಶೀಘ್ರದಲ್ಲಿ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ರೈತಸಂಘದ ಅಧ್ಯಕ್ಷ ಮಂಚನಹಳ್ಳಿ ನಾಗಣ್ಣ, ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಮರುವನಹಳ್ಳಿ ಶಂಕರ್, ಪುರಸಭಾ ಸದಸ್ಯರಾದ ಮಂಜುಳಾ ಚನ್ನಕೇಶವ, ಗೋಪಾಲ್, ಕೆ.ಆರ್.ನೀಲಕಂಠ, ರಾಜು ಸೇರಿದಂತೆ ಪ್ರತಿಭಾ ಮಹಿಳಾ ಮಂಡಳಿ ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.