ADVERTISEMENT

ಗಮನ ಸೆಳೆದ ವಸ್ತು ಪ್ರದರ್ಶನ

ರೈತ ದಿನಾಚರಣೆ, ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 5:40 IST
Last Updated 24 ಡಿಸೆಂಬರ್ 2012, 5:40 IST

ಪಾಂಡವಪುರ: ರೈತ ದಿನಾಚರಣೆ ಮತ್ತು ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮದ ಅಂಗವಾಗಿ ಭಾನುವಾರ ಕೃಷಿ ಇಲಾಖೆ ಆಯೋಜಿಸಿದ್ದ ರೈತರ ವಸ್ತು ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಟಿಎಪಿಸಿಎಂಸ್ ರೈತ ಸಭಾಂಗಣದಲ್ಲಿ ಕೃಷಿ, ತೋಟಗಾರಿಕೆ, ಜಲಾನಯನ ಅಭಿವೃದ್ದಿ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇಲಾಖೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯ ತಾಲ್ಲೂಕು ಕೃಷಿಕ ಸಮಾಜ, ರಸಗೊಬ್ಬರ ತಯಾರಿಕಾ ಸಂಸ್ಥೆಗಳು, ವಿತರಕರು, ಕೃಷಿ ಯಂತ್ರೋಪಕರಣ ಮಾರಾಟಗಾರರು, ಪಾಂಡವಪುರದ ಬಿತ್ತನೆ ಬೀಜ ವಿತರಕರ ಸಂಯುಕ್ತಾಶ್ರಯದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಕೃಷಿ ಇಲಾಖೆಯಿಂದ ಎರೆಹುಳು ರಕ್ಷಣೆಗೆ ಇಲಿ ಬೋನು, ಕೀಟನಾಶಕ, ಜೈವಿಕ ಗೊಬ್ಬರ, ಲಘು ಪೋಷಕಾಂಶ, ತೋಟಗಾರಿಕೆ ಇಲಾಖೆಯಿಂದ ತೆಂಗಿನ ಮರ ಹತ್ತುವ ಸಾಧನ, ಹಣ್ಣು ತರಕಾರಿ ಬೆಳೆಗಳ ಬಗ್ಗೆ ಮಾಹಿತಿ, ಹಂದಿ, ಕೋಳಿ, ಹೈನುಗಾರಿಕೆ ಸಾಕಾಣೆಯ ಸಂಪೂರ್ಣ ಮಾಹಿತಿ, ಬೀಜ ಮತ್ತು ಸಂಸ್ಕೃತಿ, ರೇಷ್ಮೆ ಹುಳು ಸಾಕಾಣಿಕೆಯಮಾರ್ಗಸೂಚಿ, ಹಿರಣ್ಯ ತಳಿಯ ಸಾಂಬಾರ್ ಸೌತೆಕಾಯಿ, ಮಾಲಿನಿ ತಳಿಯ ಸೌತೆಕಾಯಿ, ಗಣೇಶ್ ತಳಿಯ ಹೂಕೋಸು, ಅತಿರಿಕ್ತ ತಳಿಯ ಮೆಣಸಿನಕಾಯಿ ಸೇರಿದಂತೆ ರೈತರಿಗೆ ಉಪಯುಕ್ತವಾದ ಹಲವು ಮಾದರಿಯ ಮಾಹಿತಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು. ರೈತರಿಗೆ ಮಾಹಿತಿ ಒದಗಿಸುವ ಭೂ ಚೇತನ ಎಂಬ ನಾಟಕ ಅನ್ನದಾತನ ಮೆಚ್ಚುಗೆ ಗಳಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು.

ಶಾಸಕ ಸಿ.ಎಸ್. ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎನ್.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ವಸಂತಪ್ರಕಾಶ್, ಮಂಜುಳಾ ಪರಮೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಕೆ.ಗಾಯಿತ್ರಿ, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಪುಟ್ಟೇಗೌಡ,  ಪಿಕಾರ್ಡ್ ಅಧ್ಯಕ್ಷೆ ಶಿವರತ್ನಮ್ಮ, ಕೃಷಿಕ ಸಮಾಜ ಅಧ್ಯಕ್ಷ ಚಕ್ರಪಾಣಿ, ಕೃಷಿ ವಿಜ್ಞಾನಿಗಳಾದ ಸ್ವಾಮಿಗೌಡ, ರಾಮಚಂದ್ರು, ಸಹಾಯಕ ಕೃಷಿ ನಿರ್ದೇಶಕ ಜಿ.ಎಂ.ಮಹಾದೇವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.