ADVERTISEMENT

ಗ್ರಾ.ಪಂ. ಉಪ ಚುನಾವಣೆ: ಲಾಟರಿ ತಂದ ಅದೃಷ್ಟ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 8:55 IST
Last Updated 16 ಸೆಪ್ಟೆಂಬರ್ 2011, 8:55 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಕಿರಂಗೂರು ಗ್ರಾ.ಪಂ.ನಲ್ಲಿ ಖಾಲಿ ಇದ್ದ ಪರಿಶಿಷ್ಟ ಪಂಗಡ (ಮಹಿಳೆ)ಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಗುರುವಾರ ಲಾಟರಿ ಎತ್ತುವ ಮೂಲಕ ಸರ್ವ ಪಕ್ಷಗಳ ಮುಖಂಡರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡರು.

  ಕಳೆದ ತಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಪಕ್ಷಿದಿಂದ ಸ್ಪರ್ಧಿಸಿ ಸೋತಿದ್ದ ಜಯಮ್ಮ ರಾಮಕೃಷ್ಣ ಲಾಟರಿಯ ಅದೃಷ್ಟದಾಟದಲ್ಲಿ ಗೆಲವು ಪಡೆದರು. ಬಾಬುರಾಯನಕೊಪ್ಪಲು ಕ್ಷೇತ್ರದ ಉಪ ಚುನಾವಣೆ ಕಣದಲ್ಲಿ ತಾ.ಪಂ. ಮಾಜಿ ಸದಸ್ಯೆ ನಾಗಮ್ಮ ಹಾಗೂ ಜಯಮ್ಮ ಇದ್ದರು. ಚುನಾವಣೆ ನಡೆದರೆ ಹಣ ವ್ಯರ್ಥವಾಗುವ ಜತೆಗೆ ಗುಂಪುಗಾರಿಕೆ ಬೆಳೆಯುತ್ತದೆ ಎಂಬ ಕಾರಣಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇಬ್ಬರೂ ಉಮೇದುವಾರರನ್ನು ಲಾಟರಿ ಪ್ರಕ್ರಿಯೆಗೆ ಒಪ್ಪಿಸಿದರು. ಲಾಟರಿಗೆ ಹಾಕಿದಾಗ ಜಯಮ್ಮ ಆಯ್ಕೆಯಾದರು. ಮೊದಲೇ ಆಗಿದ್ದ ಒಪ್ಪಂದದಂತೆ ನಾಗಮ್ಮ ಮತಗಟ್ಟೆ ಅಧ್ಯಕ್ಷಾಧಿಕಾರಿ ಜಗದೀಶ್ ಅವರಿಂದ ನಾಮಪತ್ರ ವಾಪಸ್ ಪಡೆದರು. ಬಿ.ಟಿ.ಮರಿದೇವೇಗೌಡ, ಶ್ರೀನಿವಾಸ್, ಮರೀಗೌಡ, ಗುಂಡಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್, ಬಾಲಸುಬ್ರಹ್ಮಣ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ದೀಪು ಇತರರ ಸಮ್ಮುಖದಲ್ಲಿ ಈ ಲಾಟರಿ ಪ್ರಕ್ರಿಯೆ ನಡೆಯಿತು.

  ತಾಲ್ಲೂಕಿನ ಮಹದೇವಪುರ ಗ್ರಾ.ಪಂ. ವ್ಯಾಪ್ತಿಯ ಬಿದರಹಳ್ಳಿ ಹುಂಡಿ ಒಂದನೇ ಬ್ಲಾಕ್‌ಗೆ ಎನ್.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದ್ದ ಗುರುವಾರ ನಾಮಪತ್ರ ಸಲ್ಲಿಸಿದ್ದ 6 ಮಂದಿಯ ಪೈಕಿ 5 ಜನರು ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಈ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

  ತಾಲ್ಲೂಕಿನ ತಡಗವಾಡಿ ಗ್ರಾ.ಪಂ.ನ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ 11 ಮಂದಿಯ ಪೈಕಿ 9 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ಇಬ್ಬರು ಕಣದಲ್ಲಿದ್ದಾರೆ. ಪಿ.ಹೊಸಹಳ್ಳಿ ಗ್ರಾ.ಪಂ.ನ ಎರಡು ಸ್ಥಾನಗಳಿಗೆ 6 ಮಂದಿ ನಾಮಪತ್ರ ಸಲ್ಲಿಸಿದ್ದು ಒಬ್ಬರು ವಾಪಸ್ ಪಡೆದಿದ್ದಾರೆ. ಅರಕೆರೆ ಗ್ರಾ.ಪಂ.ನ ಎರಡು ಕ್ಷೇತ್ರಗಳಿಗೆ 11 ಮಂದಿ ನಾಮಪತ್ರ ಸಲ್ಲಿಸಿದ್ದರು. ಗುರುವಾರ 7 ಮಂದಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, 4 ಮಂದಿ ಕಣದಲ್ಲಿ ಉಳಿದಿದ್ದಾರೆ. ಈ ಕ್ಷೇತ್ರಗಳಿಗೆ ಸೆ.25ರಂದು ಚುನಾವಣೆ ನಡೆಯಲಿದೆ ಎಂದು ತಹಶೀಲ್ದಾರ್ ಅರುಳ್‌ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.