ADVERTISEMENT

ಗ್ರಾ.ಪಂ. ಸದಸ್ಯನ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 7:35 IST
Last Updated 25 ಮಾರ್ಚ್ 2011, 7:35 IST

ಕೃಷ್ಣರಾಜಪೇಟೆ:  ತಾಲ್ಲೂಕಿನ ಸಾರಂಗಿ ಗ್ರಾ.ಪಂ ಸದಸ್ಯ ಶ್ಯಾರಹಳ್ಳಿ ಬಾಲಕೃಷ್ಣ ಎಂಬಾತ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದು, ಆತನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸಾರಂಗಿ ಗ್ರಾಮಸ್ಥರು ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ಸಾರಂಗಿ ಗ್ರಾಮದ ಮಹಿಳೆಯೊಬ್ಬರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಆಕೆಗೆ ಮೊಬೈಲ್ ಕರೆ ಮಾಡಿ ಅಶ್ಲೀಲವಾಗಿ ಸಂಭಾಷಣೆ ನಡೆಸಿದ್ದ ಬಾಲಕೃಷ್ಣ ಕಳೆದ ಮೂರು ತಿಂಗಳಿಂದ ಗ್ರಾಮ ಪಂಚಾಯ್ತಿಯ ಯಾವುದೇ ಸಭೆಗೂ ಬಂದಿರಲಿಲ್ಲ. ಆಕೆಯ ಸಂಬಂಧಿಗಳ ಕಣ್ಣಿಗೆ ಬೀಳದಂತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಈತ ಬುಧವಾರ ಸಾರಂಗಿಯಲ್ಲಿ ನಡೆದ ಗ್ರಾಮಸಭೆಗೆ ಬಂದಿದ್ದ. ಈ ಸಂದರ್ಭದಲ್ಲಿ ಮಹಿಳೆಯ ಕಡೆಯವರ ಕೈಗೆ ಸಿಕ್ಕಿ ಬಿದ್ದು, ಅವರಿಂದ ಚೆನ್ನಾಗಿ ಗೂಸಾ ತಿಂದ ಈತ ತನ್ನ ತಪ್ಪಿಗೆ ಕ್ಷಮೆ ಯಾಚಿಸಿ, ಅಲ್ಲಿಂದ ಹೊರಬಂದಿದ್ದಾನೆ. ನಂತರ ಪಟ್ಟಣಕ್ಕೆ ಬಂದು ತನ್ನ ಮೇಲೆ ಮಹಿಳೆಯರು ಸಂಬಂಧಿಕರಿಂದ ವಿನಾಕಾರಣ ಹಲ್ಲೆ ನಡೆದಿರು ವುದಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೆ, ಆಸ್ಪತ್ರೆಗೆ ಸೇರಿದ್ದಾನೆ’ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

‘ಆರೋಪಿತ ಬಾಲಕೃಷ್ಣ ಇತರೆ ಮಹಿಳೆಯ ರೊಂದಿಗೂ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ತನಗೆ ಪರಿಚಯವಾಗುವ ಮಹಿಳೆಯರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ, ಅವರಿಗೆ ಅನಾವಶ್ಯಕವಾಗಿ ಕರೆ ಮಾಡುವುದು. ಅವರೊಂದಿಗೆ ಅಶ್ಲೀಲವಾಗಿ ಮಾತನಾಡಿ, ಮಾನಸಿಕವಾಗಿ ಹಿಂಸಿಸುವುದು. ಆತನ ಮಾತು ಕೇಳದವರ ವಿರುದ್ಧ ಅಪಪ್ರಚಾರ ಮಾಡುವ, ಹಲ್ಲೆ ಮಾಡಿಸುವ ಬೆದರಿಕೆ ಹಾಕುವುದು ಮತ್ತಿತರ ತೊಂದರೆ ನೀಡುತ್ತಾನೆ. ಈತನಿಂದ ತಮಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಮಹಿಳೆಯರು  ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ರಾಮಮೂರ್ತಿ, ಜನಪ್ರತಿನಿಧಿ ಯೊಬ್ಬರ ಮೇಲೆ ಹಲ್ಲೆ ಮಾಡುವುದು ಸರಿಯಾದ ಕ್ರಮವಲ್ಲ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳದೆ, ತಮ್ಮ ಅಹವಾಲುಗಳನ್ನು ಪೊಲೀಸರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಅನ್ಯಾಯಕ್ಕೆ ಒಳಗಾದವರಿಗೆ ಖಂಡಿತ ರಕ್ಷಣೆ ಸಿಗುತ್ತದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ, ಮುಖಂಡರಾದ ಲಲಿತಾ, ರಂಗಾಚಾರಿ, ಸುಧಾ, ಜಯರಾಮೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.