ADVERTISEMENT

ಗ್ರಾಮಸ್ಥರಿಂದಲೇ ಸರಗಳ್ಳನ ಸೆರೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:20 IST
Last Updated 3 ಜೂನ್ 2011, 6:20 IST

ಕೃಷ್ಣರಾಜಪೇಟೆ: ಅಮಾಯಕ ಮಹಿಳೆಯರನ್ನು ವಂಚಿಸಿ ಚಿನ್ನಾಭರಣ ದೋಚುತ್ತಿದ್ದ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ಪೋಲೀಸರ ವಶಕ್ಕೆ ಗುರುವಾರ ಒಪ್ಪಿಸಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನ ಬೆಟ್ಟದ ಸಾತೇನಹಳ್ಳಿ ಗ್ರಾಮದ ಸಂಪತ್ತು(33) ಬಂಧಿತ ವ್ಯಕ್ತಿ. ಈತ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ತನ್ನ ತಂಗಿಯ ಮದುವೆ ಇದೆ, ಪೋಷಕರು ಆಸ್ಪತ್ರೆಯಲ್ಲಿದ್ದಾರೆ, ಬಂಧು ತೀರಿಕೊಂಡಿದ್ದಾರೆ ಎಂದು ಸಬೂಬು ಹೇಳಿ ಸಾರ್ವಜನಿಕರ ಅನುಕಂಪ ಗಿಟ್ಟಿಸುವಲ್ಲಿ ಯಶಸ್ವಿಯಾಗುತ್ತಿದ್ದ. ನಂತರ ಅವರನ್ನು ಮರಳು ಮಾಡಿ ಮೈಮೇಲಿನ ಒಡವೆ ಬಿಚ್ಚಿಕೊಡುವಂತೆ ಒತ್ತಾಯಿಸುತ್ತಿದ್ದ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.

ತಾಲ್ಲೂಕಿನ ಚುಜ್ಜಲಕ್ಯಾತನಹಳ್ಳಿಯ ದೇವಮ್ಮ, ಮಾರ್ಗೋನಹಳ್ಳಿಯ ನಿಂಗಮ್ಮ, ಕುಪ್ಪಹಳ್ಳಿಯ ಮಂಜುಳಾ ಸೇರಿದಂತೆ ಹಲವು ಮಹಿಳೆಯರು ವಂಚನೆಗೆ ಒಳಗಾಗಿದ್ದಾರೆ. ಇವರೆಲ್ಲ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಹಿರಿಕಳಲೆ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಂಪತ್ತು ಗ್ರಾಮದ ಡಿಶ್ ಮಂಜು ಎಂಬಾತನಿಗೆ ಸಿಕ್ಕಿದ್ದಾನೆ. ಆ ವೇಳೆಗೆ ಈಗಾಗಲೇ ಸಂಪತ್ತುವಿನ ಮೋಸಕ್ಕೆ ಒಳಗಾಗಿ ತನ್ನ ಓಲೆ ಕಳೆದುಕೊಂಡಿದ್ದ ಗ್ರಾಮದ ಕಮಲಮ್ಮ ಎದುರಾಗಿ ಕಳ್ಳನನ್ನು ಗುರುತಿಸಿದ್ದಾರೆ. ಕೂಡಲೇ ಸುತ್ತುವರಿದ ಗ್ರಾಮದ ಜನರು ಈತನನ್ನು ಹಿಡಿದು, ಪೋಲಿಸರಿಗೆ ಒಪ್ಪಿಸಿದರು.

`ಆರೋಪಿ ಜತೆಗೆ ಕೃಷ್ಣರಾಜಪೇಟೆ ತಾಲ್ಲೂಕಿನ ಕೆಲವರು ಮೋಸದ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಈ ಬಗ್ಗೆಯೂ ತನಿಖೆ ನಡೆಸುವುದಾಗಿ ಪೋಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ರಾಮಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.