ADVERTISEMENT

ಘಟಾನುಘಟಿಗಳಿಗೆ ಸೋಲುಣಿಸಿದ ಕ್ಷೇತ್ರ ಮದ್ದೂರು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 4:11 IST
Last Updated 13 ಏಪ್ರಿಲ್ 2013, 4:11 IST

ಮಂಡ್ಯ: ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಕೀರ್ತಿ ಮದ್ದೂರು ವಿಧಾನಸಭೆ ಕ್ಷೇತ್ರಕ್ಕೆ ಸಲ್ಲುತ್ತದೆ. ಎಸ್.ಎಂ.ಕೃಷ್ಣ, ಎಚ್.ಕೆ. ವೀರಣ್ಣಗೌಡ, ಎಂ.ಎಸ್. ಸಿದ್ದರಾಜು ಅವರಂಥ ಘಟಾನುಘಟಿಗಳನ್ನು ಗೆಲ್ಲಿಸಿದ ಮತದಾರರು, ಸೋಲಿನ ರುಚಿಯನ್ನೂ ತೋರಿಸಿದ್ದಾರೆ.

ಆತಗೂರು, ಕಸಬಾ, ಚಿಕ್ಕರಸಿನಕೆರೆ, ಕೊಪ್ಪ ಹೋಬಳಿ (ಕೆಲ ಗ್ರಾಮಗಳು ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ) ಗಳನ್ನು ಒಳಗೊಂಡಿದೆ. ಎರಡು ಉಪ ಚುನಾವಣೆ ಸೇರಿದಂತೆ ಒಟ್ಟು 15 ಚುನಾವಣೆಗಳು ನಡೆದಿವೆ. 9 ಬಾರಿ ಕಾಂಗ್ರೆಸ್, 5 ಬಾರಿ ಜನತಾ ಪರಿವಾರ ಹಾಗೂ ಒಮ್ಮೆ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.

ಎಂ.ಮಂಚೇಗೌಡ ಕುಟುಂಬ ಒಟ್ಟು 5 ಬಾರಿ (ಪತ್ನಿ ಜಯವಾಣಿ ಮತ್ತು ಪುತ್ರ ಡಾ. ಮಹೇಶ್‌ಚಂದ್ ತಲಾ ಒಮ್ಮೆ), ಎಸ್.ಎಂ.ಕೃಷ್ಣ ಮೂರು ಬಾರಿ, ಎಚ್.ಕೆ.ವೀರಣ್ಣಗೌಡ ಹಾಗೂ ಎಂ.ಎಸ್.ಸಿದ್ದರಾಜು ಕುಟುಂಬ (ಕಲ್ಪನಾ ಸಿದ್ದರಾಜು ಒಮ್ಮೆ) ತಲಾ 2 ಬಾರಿ ಗೆಲುವು ಪಡೆದಿದ್ದು, ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿದ್ದಾರೆ. ಉಳಿದಂತೆ, ಎ.ಡಿ.ಬಳೀಗೌಡ, ಬಿ.ಅಪ್ಪಾಜಿಗೌಡ, ಡಿ.ಸಿ.ತಮ್ಮಣ್ಣ ತಲಾ 1 ಬಾರಿ ಚುನಾಯಿತರಾಗಿದ್ದಾರೆ.

ಕ್ಷೇತ್ರದಲ್ಲಿ ನಡೆದಿರುವ ಎರಡು ಉಪ ಚುನಾವಣೆಗಳಲ್ಲೂ ಮಹಿಳೆಯರೇ ಗೆಲುವು ಸಾಧಿಸಿದ್ದಾರೆ. 1984ರಲ್ಲಿ ಕಾಂಗ್ರೆಸ್‌ನ ಜಯವಾಣಿ ಮಂಚೇಗೌಡ; 2008ರಲ್ಲಿ ಜೆಡಿಎಸ್‌ನ ಕಲ್ಪನಾ ಸಿದ್ದರಾಜು ಅವರು ಗೆಲುವಿನ ನಗೆ ಚೆಲ್ಲಿ ವಿಧಾನಸಭೆಯ ಮೊಗಸಾಲೆ ಪ್ರವೇಶಿಸಿದ್ದಾರೆ.

1952 ಮತ್ತು 57ರ ಚುನಾವಣೆಯಲ್ಲಿ ಮೂಲತಃ ಚನ್ನಪಟ್ಟಣ ತಾಲ್ಲೂಕಿನವರಾದ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಎಚ್.ಕೆ. ವೀರಣ್ಣಗೌಡರು ಗೆಲುವು ಸಾಧಿಸಿದರು. ಭವಿಷ್ಯದ `ಮುಖ್ಯಮಂತ್ರಿ' ಎಂದು ಬಿಂಬಿಸಲ್ಪಟ್ಟಿದ್ದ ವೀರಣ್ಣಗೌಡರು 1962ರಲ್ಲಿ ನಡೆದ ಚುನಾವಣೆಯಲ್ಲಿ ಸೋಲನುಭವಿಸಿದರು.

ಬರಗಾಲದಲ್ಲಿ ಅಗತ್ಯವಿರುವವರಿಗೆ ದವಸ-ಧಾನ್ಯ ಹಂಚಿಕೆ ಮಾಡಿ `ಜೋಳದ ಮಂಚೇಗೌಡ' ಎಂದು ಹೆಸರಾದ ಮಂಚೇಗೌಡರು 1967ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎಸ್.ಎಂ. ಕೃಷ್ಣ ಅವರ ವಿರುದ್ಧ ಗೆಲುವು ಸಾಧಿಸಿದರು. 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಪಡೆದರು.

1983ರಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಜಯಭೇರಿ ಬಾರಿಸಿದರಾದರೂ, ಕೆಲ ತಿಂಗಳ ಬಳಿಕ ನಿಧನರಾದರು. 1984ರಲ್ಲಿ ನಡೆದ ಮೊದಲ ಉಪ ಚುನಾವಣೆಯಲ್ಲಿ ಅನುಕಂಪದ ಅಲೆಯಲ್ಲಿ ಗೌಡರ ಪತ್ನಿ ಜಯವಾಣಿ ಜಯ ದಾಖಲಿಸಿದರು. ಬದಲಾದ ರಾಜಕೀಯದಿಂದಾಗಿ ಇವರ ಪುತ್ರ ಡಾ. ಎಂ.ಎಸ್.ಮಹೇಶ್‌ಚಂದ್ 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆದ್ದರು.

1962, 89ರಲ್ಲಿ ಗೆಲುವು ಪಡೆದಿದ್ದ ಕೃಷ್ಣ ಅವರು, ಉಪ ಮುಖ್ಯಮಂತ್ರಿ ಆಗಿದ್ದ ಬಳಿಕ 1994ರಲ್ಲಿ ಜರುಗಿದ ಚುನಾವಣೆಯಲ್ಲಿ ಸೋಲು ಕಂಡರು. ಕೆಪಿಸಿಸಿ ಅಧ್ಯಕ್ಷರಾಗಿದ್ದ ಕೃಷ್ಣ 1999ರಲ್ಲಿ ನಡೆದ ಚುನಾವಣೆಯಲ್ಲಿ `ಪಾಂಚಜನ್ಯ' ಮೊಳಗಿಸಿದರು. ಈ ಹಿಂದೆ ಜಿಲ್ಲೆಗೆ ತಪ್ಪಿದ್ದ `ಮುಖ್ಯಮಂತ್ರಿ' ಪಟ್ಟ ಮತ್ತೆ ತಪ್ಪಬಾರದು ಎನ್ನುವ ಕಾರಣಕ್ಕೆ ಎಂ.ಎಸ್.ಸಿದ್ದರಾಜು ಅವರು ಕೃಷ್ಣ ಅವರನ್ನು ಬೆಂಬಲಿಸಿದರು. ಕೃಷ್ಣ ಅವರು 56,907 ಮತಗಳನ್ನು ಪಡೆದು ಜಯಭೇರಿ ಬಾರಿಸಿ ರಾಜ್ಯದ ಮುಖ್ಯಮಂತ್ರಿಯೂ ಆದರು.

2008ರಲ್ಲಿ ರೈತ ಪರ ಹೋರಾಟಗಾರ ಎಂ.ಎಸ್.ಸಿದ್ದರಾಜು, ಜೆಡಿಎಸ್‌ನಿಂದ ಸ್ಪರ್ಧಿಸಿ ಜಯ ಪಡೆದರಾದರೂ ಅಕಾಲಿಕ ಸಾವಿಗೀಡಾದರು. ಅದೇ ವರ್ಷದಲ್ಲಿ ನಡೆದ ಉಪಚುನಾವಣೆಯಲ್ಲಿ ಸಿದ್ದರಾಜು ಪತ್ನಿ ಕಲ್ಪನಾ ಅವರು ಗೆಲುವು ದಾಖಲಿಸಿದರು.

ಉಳಿದಂತೆ ಕ್ಷೇತ್ರದಲ್ಲಿ 1972ರಲ್ಲಿ ಎ.ಡಿ.ಬಿಳೀಗೌಡ ಮತ್ತು 1985ರಲ್ಲಿ ಬಿ.ಅಪ್ಪಾಜಿಗೌಡ ಗೆದ್ದರೆ, 2004ರಲ್ಲಿ ಡಿ.ಸಿ.ತಮ್ಮಣ್ಣ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.