ADVERTISEMENT

ಚೊಟ್ಟನಹಳ್ಳಿಯಿಂದ ಸರ್ವೆ ಕಾರ್ಯ ಶುರು

ಸ್ವಾತಂತ್ರ್ಯಾ ನಂತರ ಭೂ ಮಾಪನಕ್ಕೆ ಮರು ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:34 IST
Last Updated 19 ಡಿಸೆಂಬರ್ 2013, 5:34 IST

ಶ್ರೀರಂಗಪಟ್ಟಣ: ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಿಂದ ಭೂ ಮಾಪನಾ ಕಾರ್ಯವನ್ನು ಆರಂಭಿಸಲಾಗುತ್ತಿದೆ ಎಂದು ತಹಶೀಲ್ದಾರ್‌ ಬಿ.ಸಿ. ಶಿವಾನಂದ ಮೂರ್ತಿ ತಿಳಿಸಿದರು.

ತಾಲ್ಲೂಕಿನ ಚೊಟ್ಟನಹಳ್ಳಿಯಲ್ಲಿ ಭೂಮಿ ಮರು ಮಾಪನಾ ಕಾರ್ಯ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ, ಸರ್ವೆ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು.

ಇನ್ಫೋಟೆಕ್‌ ಸಂಸ್ಥೆಯ ಸಹಯೋಗದಲ್ಲಿ ಸರ್ವೆ ಕಾರ್ಯ ನಡೆಯಲಿದೆ. ಡಿ. 20ರಿಂದ ಭೂ ಮಾಪನ ಕಾರ್ಯ ಆರಂಭವಾಗಲಿದ್ದು, 15 ದಿನಗಳ ಒಳಗೆ ಮಾಪನ ಕಾರ್ಯ ಪೂರ್ಣಗೊಳ್ಳಲಿದೆ. ಚೊಟ್ಟನಹಳ್ಳಿ ಯಲ್ಲಿ ಒಟ್ಟು 85 ಸರ್ವೆ ನಂಬರ್‌ಗಳಿದ್ದು, 283 ಪಹಣಿಗಳಿವೆ.

ಉದ್ದೇಶಿತ ಸರ್ವೆ ಕಾರ್ಯಕ್ಕೆ ಕಂದಾಯ ಮತ್ತು ಇನ್ಫೋಟೆಕ್‌ ಸಂಸ್ಥೆಯ 3 ತಂಡಗಳನ್ನು ರಚಿಸಲಾಗಿದೆ. ನವೀನ ತಂತ್ರಜ್ಞಾನ ಬಳಸಿ ಈ ಸರ್ವೆ ನಡೆಸಲಾಗುತ್ತಿದೆ ಎಂದರು.

ಉಪ ವಿಭಾಗಾಧಿಕಾರಿ ಬಿ.ವಾಣಿ ಮಾತನಾಡಿ, ಭೂ ಮಾಪನದ ವೇಳೆ ಭೂ ದಾಖಲೆಗಳ ವ್ಯತ್ಯಾಸವನ್ನು ಸರಿಪಡಿಸಲಾಗುವುದು. ಸರ್ವೆ ಕಾರ್ಯಕ್ಕೂ ಮುನ್ನ ಜಮೀನಿನ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತದೆ. ರೈತರ ಸಮಕ್ಷಮದಲ್ಲಿ ಮಾಪನ ಕಾರ್ಯ ನಡೆಸಿ ವಸ್ತುಸ್ಥಿತಿ ದಾಖಲಿಸಲಾಗುತ್ತದೆ. ನ್ಯಾಯಾಲಯ ದಲ್ಲಿ ಇಲ್ಲದ ಸಣ್ಣ ವ್ಯಾಜ್ಯಗಳನ್ನು ಸ್ಥಳದಲ್ಲೇ ಪರಿಹರಿಸಲಾಗುತ್ತದೆ ಎಂದರು.
ಭೂ ಮಾಪನ ಇಲಾಖೆ ಉಪ ನಿರ್ದೇಶಕಿ ರಮ್ಯಾ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ ಮಾತನಾಡಿದರು. ಸಹಾಯಕ ಭೂ ಮಾಪನ ಅಧಿಕಾರಿ ಶ್ರೀಧರ್‌, ಉಪ ತಹಶೀಲ್ದಾರ್‌ಗಳಾದ ಶಕುಂತಲಾ, ಜಯರಾಂ, ಕಂದಾಯ ನಿರೀಕ್ಷಕ ಗಣೇಶ್‌, ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.