ADVERTISEMENT

ಛಲದ ಜತೆ ಬಲದ ಪಾಠ ಹೇಳುವ ಮಹಿಳೆಯರು!

ದೊಡ್ಡರಸಿನಕೆರೆಯಲ್ಲಿ ಜನವಾದಿ ಮಹಿಳಾ ಸಂಘಟನೆಯಿಂದ ಹಲವು ಕಾರ್ಯಕ್ರಮ

ಅಂಬರಹಳ್ಳಿ ಸ್ವಾಮಿ
Published 8 ಮೇ 2017, 7:39 IST
Last Updated 8 ಮೇ 2017, 7:39 IST
ಭಾರತೀನಗರ: ಮಹಿಳೆ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂದು ಸಮೀಪದ ದೊಡ್ಡರಸಿನಕೆರೆ ಗ್ರಾಮದ ಮಹಿಳೆಯರು ತೋರಿಸಿಕೊಟ್ಟಿದ್ದಾರೆ.
ಜನವಾದಿ ಮಹಿಳಾ ಸಂಘಟನೆಯಡಿ ಒಗ್ಗೂಡಿರುವ ಗ್ರಾಮದ ಮಹಿಳೆಯರು ವೈಯಕ್ತಿಕ ಅಭಿವೃದ್ಧಿ ಜತೆಗೆ ಗ್ರಾಮದ ಅಭಿವೃದ್ಧಿಗೂ ಪಣ ತೊಟ್ಟಿದ್ದಾರೆ.

ಗ್ರಾಮದ ಸುಮಾರು 1000 ಮಹಿಳೆಯರು  ಸಂಘದ ಸದಸ್ಯತ್ವ ಹೊಂದಿರುವುದೇ ಇದಕ್ಕೆ ನಿದರ್ಶನ. ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆ ಆರಂಭಗೊಂಡು ಆರೇಳು ವರ್ಷ ಕಳೆದಿದೆ. 
 
ಅಲ್ಲಿಂದೀಚೆಗೆ ಗ್ರಾಮದ ಮಹಿಳೆ ಯರಿಗೆ ಇನ್ನಿಲ್ಲದ ಗೌರವ ಬಂದಿದೆ.  ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ, ಸಂಘಟನೆಯ ಪದಾಧಿಕಾರಿಗಳು ಹಾಜರಿರುತ್ತಾರೆ. ನೊಂದ ಹಲವು ಮಹಿಳೆಯರು ದೂರು ಹೊತ್ತು ಸಂಘಟನೆಯ ಪದಾಧಿಕಾರಿಗಳನ್ನು ಸಂಪರ್ಕಿಸಿ ನ್ಯಾಯ ಪಡೆಯುತ್ತಿದ್ದಾರೆ.
 
ಸಂಘಟನೆಯ ಕಾರ್ಯ ಕೇವಲ ಹೋರಾಟಕ್ಕೆ ಮಾತ್ರ ಸೀಮಿತವಾಗಿರದೆ ಮಹಿಳೆಯರಿಗೆ ಹಲವು ಸರ್ಕಾರಿ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 
 
ಗ್ರಾಮ ಪಂಚಾಯ್ತಿ ಆಯೋಜಿಸುವ ಗ್ರಾಮಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ, ಜನಪ್ರತಿನಿಧಿಗಳನ್ನು ಹಾಗು ಅಧಿಕಾರಿಗಳನ್ನು ಪ್ರಶ್ನಿಸುವ ಧೈರ್ಯ ತೋರುವಂತೆ ಮಹಿಳೆಯರನ್ನು ತಯಾರು ಮಾಡಲಾಗುತ್ತಿದೆ.
 
ಅಲ್ಲದೇ ಸ್ವಸಹಾಯ ಸಂಘಗಳ ಮೂಲಕ ಅಭಿವೃದ್ದಿ ಸಾಧನೆ, ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ, ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ... ಒಂದಲ್ಲ ಒಂದು ಜಾಗೃತಿ ಕಾರ್ಯಕ್ರಮಗಳು ತಿಂಗಳಿಗೆ ಒಂದಾದರೂ ನಡೆಯುತ್ತಿರುತ್ತವೆ.
 
ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ  ತಕ್ಷಣ ಸ್ಪಂದಿಸುವುದೇ ಸಂಘಟನೆಯ  ಧ್ಯೇಯ. ಗ್ರಾಮ ಪಂಚಾಯ್ತಿ ಮೂಲಕ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿ ಕೆಲಸಕ್ಕಾಗಿ ಸತತ 3 ವರ್ಷ ಹೋರಾಟ ಮಾಡಿ ಕೂಲಿ ಕೆಲಸ ದಕ್ಕಿಸಿಕೊಂಡಿದ್ದಾರೆ. ಹೋರಾಟದ ಫಲವಾಗಿ ಇಲ್ಲಿನ ಗ್ರಾಮ ಪಂಚಾಯ್ತಿ ಕೆರೆಯ ಹೂಳು ತೆಗೆಯುವ ಕೆಲಸ ಕೊಟ್ಟಿದೆ.
 
ಇದನ್ನು ಸವಾಲಾಗಿ ಸ್ವೀಕರಿಸಿರುವ ಸಂಘದ ಪದಾಧಿಕಾರಿಗಳು ಗ್ರಾಮದ 100ಕ್ಕೂ ಹೆಚ್ಚು ಮಹಿಳೆಯರು ಹಾಗು ಪುರುಷರನ್ನು  ಕೂಲಿಗಾಗಿ ನೋಂದಾಯಿಸಿ ಕೆರೆಯ ಹೂಳು ತೆಗೆಯುವ ಕೆಲಸ ಆರಂಭಿಸಿದ್ದಾರೆ. ಇದರಲ್ಲಿ ಯಶಸ್ವಿಯಾಗುವ ಭರವಸೆ ಹೊಂದಿದ್ದಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.