ADVERTISEMENT

ಜಲಪಾತಗಳ ಅಭಿವೃದ್ಧಿ ಚುರುಕಾಗಲಿ

ಅಧಿಕಾರಿಗಳಿಗೆ ಸಚಿವ ಮಹದೇವಪ್ರಸಾದ್ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 5:37 IST
Last Updated 1 ಜುಲೈ 2013, 5:37 IST
ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತವನ್ನು ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಭಾನುವಾರ ವೀಕ್ಷಿಸಿದರು. ಶಾಸಕ ಆರ್.ನರೇಂದ್ರ ಇದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತವನ್ನು ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಭಾನುವಾರ ವೀಕ್ಷಿಸಿದರು. ಶಾಸಕ ಆರ್.ನರೇಂದ್ರ ಇದ್ದಾರೆ.   

ಕೊಳ್ಳೇಗಾಲ: `ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ `ಜಲಪಾತೋತ್ಸವ' ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಭರಚುಕ್ಕಿ ಬಳಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಜಲಪಾತಗಳ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

`2009ರಲ್ಲಿ ರೂ 4.25 ಕೋಟಿ ಅಂದಾಜಿನಲ್ಲಿ ಜಲಪಾತಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣ ಬಿಡುಗಡೆ ಮಾಡಿವೆ. ಪ್ರಸ್ತುತ ರೂ 1.40 ಕೋಟಿ ಕಾಮಗಾರಿ ಮಾತ್ರ ನಡೆದಿದೆ. ಈ ಹಿನ್ನಡೆಗೆ ಕಾರಣವೇನು' ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅ
ನುದಾನ ಇದ್ದರೂ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಮುಂಬರುವ ಜಲಪಾತೋತ್ಸವದೊಳಗೆ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು. ಭರಚುಕ್ಕಿಯಲ್ಲಿ ಬಣ್ಣಬಣ್ಣದ ದೀಪಾಲಂಕಾರ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಜಲಪಾತದ ಸ್ವಾಗತ ಕಮಾನು, ಮಾರ್ಗದರ್ಶಿ ನಕ್ಷೆ ಅಳವಡಿಸಲು ಸಲಹೆ ನೀಡಿದರು.

ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಗೆ ರೂ 100 ಕೋಟಿಯನ್ನು ಕೇಂದ್ರ ಸರ್ಕಾರದಿಂದ ಕೋರಿದ್ದು, ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ. ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ಇನ್ನೂ ಮೇಲ್ದರ್ಜೆಗೇರಿಸಲು ಶ್ರಮಿಸುವುದಾಗಿ ತಿಳಿಸಿದರು. ಶಾಸಕ ನರೇಂದ್ರ ಮಾತನಾಡಿ, ಸಮೂಹ ದೇವಾಲಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಶಾಸಕ ಎಸ್. ಜಯಣ್ಣ, ಉಪವಿಭಾಗಾಧಿಕಾರಿ ಎಚ್.ಎಸ್. ಸತೀಶ್‌ಬಾಬು, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವೇದ್ ಮಮ್ತಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್, ಡಿವೈಎಸ್‌ಪಿ ಚೆನ್ನಬಸವಣ್ಣ, ತಹಶೀಲ್ದಾರ್ ಮಾಳಿಗಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಮಹಾದೇವಸ್ವಾಮಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ತಹಶೀಲ್ದಾರ್ ನಂದಕಿಶೋರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.