ADVERTISEMENT

ಜಲಾನಯನ ಕಾಮಗಾರಿಗಳ ವೀಕ್ಷಣೆಗೆ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 4:30 IST
Last Updated 16 ನವೆಂಬರ್ 2012, 4:30 IST
ಜಲಾನಯನ ಕಾಮಗಾರಿಗಳ ವೀಕ್ಷಣೆಗೆ ತಂಡ ರಚನೆ
ಜಲಾನಯನ ಕಾಮಗಾರಿಗಳ ವೀಕ್ಷಣೆಗೆ ತಂಡ ರಚನೆ   

ಮಂಡ್ಯ: ಜಲಾನಯನ ಇಲಾಖೆ ವತಿಯಿಂದ ತೆಗೆದುಕೊಂಡಿರುವ ವಿವಿಧ ಕಾಮಗಾರಿ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ನೆಟ್ಟಿರುವ ಸಸಿಗಳ ವೀಕ್ಷಣೆಗೆ ತಂಡವೊಂದನ್ನು ಕಳುಹಿಸಲಾಗುವುದು ಎಂದು ಸಂಸದ ಎನ್. ಚಲುವರಾಯಸ್ವಾಮಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನೆಟ್ಟ ಸಸಿಗಳಲ್ಲಿ ಎಷ್ಟು ಉಳಿದಿವೆ. ಎಷ್ಟು ಸಸಿಗಳನ್ನು ನೆಡಲಾಗಿದೆ ಎಂಬುದನ್ನು ಪರಿಶೀಲಿಸಿ ಎಂದು ಸಮಿತಿಯ ಸದಸ್ಯರಿಗೆ ಸೂಚಿಸಿದರು.

ಇಂದಿರಾ ಆವಾಸ್ ಯೋಜನೆಯಡಿ ಐದು ವರ್ಷಗಳಿಂದಲೂ ಮನೆಗಳು ಬಾಕಿ ಉಳಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಆಸಕ್ತಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಮನೆಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಅದನ್ನು ಬಳಸಿಕೊಳ್ಳದಿದ್ದರೆ ಹೇಗೆ? ಅದು, ಮರಳಿ ಹೋಗುವುದೆಂದು ಕಾಯುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಮದ್ದೂರು ತಾಲ್ಲೂಕಿನ ಕೆ. ಬೆಳ್ಳೂರು ಹಾಗೂ ಸುತ್ತಿಲಿನ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ಕಲ್ಪನಾ ಸಿದ್ದರಾಜು, ಬರಗಾಲದಲ್ಲಿಯೇ ಕಾಮಗಾರಿ ಮಾಡಿಲ್ಲ. ಮಳೆಗಾಲದಲ್ಲಿ ಮಾಡುವಿರಾ ಎಂದು ಪ್ರಶ್ನಿಸಿದರು.

ಕೂಡಲೇ ಮಧ್ಯಪ್ರವೇಶಿಸಿದ ಸಂಸದ ಚಲುವರಾಯಸ್ವಾಮಿ, ಹತ್ತು ದಿನಗಳಲ್ಲಿ ನಾನೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಜನವರಿ ವೇಳೆಗೆ ಉದ್ಘಾಟನೆಯಾಗಬೇಕು ಎಂದು ಸೂಚಿಸಿದರು. ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಹೊಸಹಳ್ಳಿ ಬಹುಗ್ರಾಮ ಯೋಜನೆಯ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಕೂಡಲೇ ಅದನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸದಸ್ಯ ಕಾರಸವಾಡಿ ಮಹದೇವು ಮಾತನಾಡಿ, ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುವ ಯೋಜನೆಗಳ ಪ್ರಗತಿಯನ್ನು ಬ್ಯಾಂಕ್‌ಗಳು ನೀಡಿಲ್ಲ ಎಂದು ದೂರಿದರು. ಜಿಲ್ಲಾ ಪಂಚಾಯಿತಿ ಸಿಇಒ ಪಿ.ಸಿ. ಜಯಣ್ಣ ಮಾತನಾಡಿ, ಶೀಘ್ರದಲ್ಲಿಯೇ ಸಂಸದರ ನೇತೃತ್ವದಲ್ಲಿ ಬ್ಯಾಂಕರುಗಳ ಸಭೆ ನಡೆಸಲಾಗುವುದು ಎಂದರು.

ಶಾಸಕ ಎಂ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಬಸವರಾಜು, ಉಪಾಧ್ಯಕ್ಷ ಶಂಕರೇಗೌಡ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.