ಮಂಡ್ಯ: ಜಿಲ್ಲಾ ಪಂಚಾಯ್ತಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ಸಭೆಯ ಗಮನಕ್ಕೆ ತಾರದೇ ಮೇಲುಕೋಟೆಗೆ ಬಿಡುಗಡೆ ಮಾಡಿದ್ದನ್ನು ಖಂಡಿಸಿ ಪ್ರತಿಪಕ್ಷ ಸದಸ್ಯರು ಬುಧವಾರ ನಡೆದ ಸಾಮಾನ್ಯಸಭೆಯನ್ನು ಕೆಲಕಾಲ ಬಹಿಷ್ಕರಿಸಿ ಘಟನೆ ನಡೆಯಿತು.
ಪ್ರತಿಪಕ್ಷ ನಾಯಕ ಬಸವರಾಜು ಅವರು, 2010-11ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ 5.25 ಕೋಟಿ ರೂ ಅನುದಾನದಲ್ಲಿ 78 ಲಕ್ಷ ರೂಪಾಯಿಯನ್ನು ಮೇಲುಕೋಟೆಗೆ ಬಿಡುಗಡೆ ಮಾಡಲಾಗಿದೆ. ಇದನ್ನು ಸಾಮಾನ್ಯಸಭೆಯ ಗಮನಕ್ಕೆ ತಂದಿಲ್ಲ. ಅದನ್ನು ಸರ್ಕಾರದಿಂದ ಮತ್ತೆ ಬಿಡುಗಡೆ ಮಾಡಿಸುವ ಪ್ರಯತ್ನ ಆಗಿಲ್ಲ ಎಂದು ದೂರಿದರು.
ಆಗ ಅಧ್ಯಕ್ಷರಾಗಿದ್ದ ಸುರೇಶ ಕಂಠಿ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿದೆ ಇದರಿಂದ ಕೋಪಗೊಂಡ ಸದಸ್ಯರು ಸಭೆಯಿಂದ ಹೊರ ನಡೆದರು.
ಸಂಧಾನದ ನಂತರ ಮತ್ತೆ ಸಭೆಗೆ ಆಗಮಿಸಿದ ಪ್ರತಿಪಕ್ಷದ ಸದಸ್ಯರು, 78 ಲಕ್ಷ ರೂಪಾಯಿಯನ್ನು ಸರ್ಕಾರದಿಂದ ಬಿಡುಗಡೆಗೊಳಿಸುವ ಬಗೆಗೆ ಭರವಸೆ ನೀಡಬೇಕು ಎಂದರು.
ಉಪಾಧ್ಯಕ್ಷ ಡಾ.ಶಂಕರೇಗೌಡ ಮಾತನಾಡಿ, ಮೇಲುಕೋಟೆಯ ಚಲುವನಾರಾಯಣ ದೇವಾಲಯದ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಅನುದಾನ ಮತ್ತೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿ ವಿಷಯಕ್ಕೆ ತೆರೆ ಎಳೆದರು.
ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಭವನಗಳ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. ಎಲ್ಲೆಲ್ಲಿ ನಿರ್ಮಾಣವಾಗುತ್ತಿವೆ ಎಂಬ ಮಾಹಿತಿಯೂ ಸದಸ್ಯರಿಗೆ ಇಲ್ಲ ಎಂದು ಸದಸ್ಯರಾದ ಮಂಜೇಗೌಡ, ಕುಮಾರ್ ದೂರಿದರು.
ನಿರ್ಮಾಣದ ಮಾಹಿತಿಯನ್ನು ಒದಗಿಸುತ್ತೇನೆ. ನಿವೇಶನ ದೊರೆಯದ್ದರಿಂದ ಕೆಲವು ಕಡೆಗಳಲ್ಲಿ ನಿರ್ಮಾಣ ಮಾಡಲು ಆಗುತ್ತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೆಂಕಟರಮಣರೆಡ್ಡಿ ಹೇಳಿದರು.
ವಿವಿಧ ಇಲಾಖೆಗಳಲ್ಲಿ 22.75 ಅನುದಾನ ವೆಚ್ಚ ಸಂಪೂರ್ಣವಾಗಿ ಆಗುತ್ತಿಲ್ಲ. ಈ ಬಗೆಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸದಸ್ಯ ಸುರೇಶ ಕಂಠಿ ಆಗ್ರಹಿಸಿದರು.
ಅನುದಾನ ವೆಚ್ಚವಾಗಿರುವ ಮಾಹಿತಿಯನ್ನು ಸದಸ್ಯರಿಗೆ ನೀಡುವಂತೆ ಜಿ.ಪಂ. ಸಿಇಒ ಪಿ.ಸಿ. ಜಯಣ್ಣ ಸೂಚಿಸಿದರು.
ಕೂಡಲೇ ಆ ಶಾಲೆಗಳಲ್ಲಿ ಶೇ 75 ರಷ್ಟು ಮಕ್ಕಳು ಅಲ್ಪಸಂಖ್ಯಾತ ಸಮುದಾಯವರಿದ್ದಾರೆಯೇ ಎಂದು ಪರಿಶೀಲಿಸಬೇಕು. ಒಂದು ವಾರದಲ್ಲಿ ವರದಿ ನೀಡಬೇಕು. ಅಷ್ಟು ಪ್ರವೇಶ ಪಡೆಯದ ಶಾಲೆಗಳನ್ನು ಆ ಪಟ್ಟಿಯಿಂದ ಕೈಬಿಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಅಧಿಕಾರಿಗಳಿಗೆ ಸಿಇಒ ಪಿ.ಸಿ. ಜಯಣ್ಣ ಸೂಚಿಸಿದರು.
ಅಂಗನವಾಡಿ ಕಟ್ಟಡ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ವಿವಿಧ ವಿಷಯಗಳ ಬಗೆಗೆ ಚರ್ಚಿಸಲಾಯಿತು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ಬಸವರಾಜು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್. ವಿಜಯಾನಂದ, ಸಿ.ಎಂ. ಸತೀಶ್, ಮಂಜುಳಾ ಪರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.