ಶ್ರೀರಂಗಪಟ್ಟಣ: ನನ್ನ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ 15 ಸಾವಿರ ಸದಸ್ಯರನ್ನು ಕನ್ನಡ ಸಾಹಿತ್ಯ ಪರಿಷತ್‌ಗೆ ನೋಂದಾಯಿಸುವ ಸಂಕಲ್ಪ ಮಾಡಿದ್ದೇನೆ ಎಂದು ಕಸಾಪ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಪ್ರಜ್ಞಾವಂತರು ಸಾಹಿತ್ಯ ಪರಿಷತ್‌ನ ಸದಸ್ಯರಾಗಬೇಕು ಎಂಬುದು ನನ್ನ ಬಯಕೆ. ಅದಕ್ಕೆ ಪೂರಕವಾಗಿ ಎಲ್ಲ ತಾಲ್ಲೂಕು ಘಟಕಗಳ ಅಧ್ಯಕ್ಷ, ಪದಾಧಿಕಾರಿಗಳ ಸಹಕಾರದಲ್ಲಿ ಗುರಿ ಸಾಧಿಸುವ ಭರವಸೆ ಇದೆ. ಉತ್ತಮ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಲು ಎಲ್ಲರ ಸಹಕಾರ ಬೇಕು ಎಂದು ಕೋರಿದರು. ಸರ್ಕಾರದ ಶಿಕ್ಷಣ ನೀತಿ ವಿರೋಧಿಸಿ ಜು.21ರಂದು ಕಸಾಪದಿಂದ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.
ಮಾತಿನ ಚಕಮಕಿ: ಅಭಿಂದನಾ ಭಾಷಣ ಮಾಡುವ ವೇಳೆ ಶಿಕ್ಷಕ-ಶಿಕ್ಷಕೇತರರ ಸಂಘದ ಅಧ್ಯಕ್ಷ ಎನ್.ಕೆ.ನಂಜಪ್ಪಗೌಡ ಆಡಿದ ಮಾತು ವಾಗ್ವಾದಕ್ಕೆ ಕಾರಣವಾಯಿತು. ತಾಲ್ಲೂಕು ಅಧ್ಯಕ್ಷರಿಗೆ ಒಂದೂವರೆ ವರ್ಷ ಅವಕಾಶ ಕೊಡಲಾಗಿದ್ದು, ಉಳಿದ ಅವಧಿಗೂ ಅವರನ್ನೇ ಮುಂದುವರಿಸಬೇಕು ಎಂದು ಹೇಳಿದಾಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಲಿಂಗಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹೀಗೆ ಅನುಚಿತ ಮಾತನಾಡುವುದು ಸರಿಯಲ್ಲ ಎಂದರು.
ಒಂದು ಹಂತದಲ್ಲೆ ಈ ಇಬ್ಬರೂ ಹಿರಿಯರ ನಡುವೆ ಮಾತಿನ ಚಕಮಕಿಯೇ ನಡೆಯಿತು. ಕಾರ್ಯಕ್ರಮ ಗೊಂದಲದ ಗೂಡಾಗಿ ಪರಿಣಮಿಸಿತು. ಎನ್.ಕೆ.ನಂಜಪ್ಪಗೌಡ ತಮ್ಮ ಮಾತನ್ನು ಹಿಂಪಡೆಯುತ್ತೇನೆ ಎಂದು ಹೇಳಿದ ನಂತರ ಪರಿಸ್ಥಿತಿ ತಿಳಿಯಾಯಿತು. ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಕರಿಮುದ್ದೀನ್, ಡಾ.ಬಿ.ಸುಜಯಕುಮಾರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಅನಾರ್ಕಲಿ ಸಲೀಂ, ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಆನಂದ್, ನಿಕಟ ಪೂರ್ವ ಅಧ್ಯಕ್ಷ ಬಲ್ಲೇನಹಳ್ಳಿ ಶಂಕರ್, ಮಜ್ಜಿಗೆಪುರ ಶಿವರಾಂ ಇದ್ದರು.
ಸಸಿ ವಿತರಣೆಗೆ ಚಾಲನೆ ಇಂದು
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಭೂಮಿಯ ಮೇಲಿನ ಹಸಿರು ಹೊದಿಕೆ ಹೆಚ್ಚಿಸಲು ರೈತರಿಗೆ ವಿವಿಧ ಬಗೆಯ ಸಸಿಗಳನ್ನು ವಿತರಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಅನುಪಮಾ ತಿಳಿಸಿದ್ದಾರೆ.
ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಸಸಿ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ರೈತರಿಗೆ ಟೀಕ್ ಮತ್ತು ಸಿಲ್ವರ್ ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. 6/9 ಎತ್ತರದ ಸಸಿಗೆ ಒಂದು ರೂಪಾಯಿ, 8/2 ಸಸಿಗೆ ರೂ.2 ಹಾಗೂ 14/20 ಅಳತೆಯ ಸಸಿಗೆ ರೂ.5 ನಿಗದಿಪಡಿಸಲಾಗಿದೆ. ನೆಟ್ಟು ಉಳಿಯುವ ಪ್ರತಿ ಸಸಿಗಳಿಗೆ ಮೊದಲ ವರ್ಷ ರೂ.10, ಎರಡನೆ ವರ್ಷ ರೂ.15 ಹಾಗೂ ಮೂರನೇ ವರ್ಷ ರೂ.20 ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದ್ದಾರೆ.
ಆಸಕ್ತ ರೈತರು ಶ್ರೀಗಂಧದ ಸಸಿಗಳನ್ನು ಕೂಡ ಬೆಳೆಯಬಹುದು. ಜಮೀನಿನ ಬದುಗಳಲ್ಲಿ ಹಾಗೂ ಬೀಳು ಜಮೀನುಗಳಲ್ಲಿ ಸಸಿಗಳನ್ನು ಬೆಳೆಸುವುದರಿಂದ ರೈತರಿಗೆ ಆದಾಯ ಸಿಗಲಿದೆ. ಅಲ್ಲದೆ ಹಸಿರು ಹೊದಿಕೆ ಕೂಡ ಹೆಚ್ಚಲಿದ್ದು ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಅರಣ್ಯ ಇಲಾಖೆಯಲ್ಲಿ ರೈತರು ತಮ್ಮ ಹೆಸರು ನೋಂದಾಯಿಸಿಕೊಂಡು ಪ್ರಯೋಜನ ಪಡೆಯಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.