ADVERTISEMENT

ಜೀವನ ಶಿಕ್ಷಣ ನೀಡುವ ಮಕ್ಕಳ ಮೇಷ್ಟ್ರು!

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 9:15 IST
Last Updated 16 ಜೂನ್ 2012, 9:15 IST
ಜೀವನ ಶಿಕ್ಷಣ ನೀಡುವ ಮಕ್ಕಳ ಮೇಷ್ಟ್ರು!
ಜೀವನ ಶಿಕ್ಷಣ ನೀಡುವ ಮಕ್ಕಳ ಮೇಷ್ಟ್ರು!   

ಶ್ರೀರಂಗಪಟ್ಟಣ: ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದಷ್ಟೇ ಶಿಕ್ಷಕನ ಕೆಲಸ ಎಂದು ಭಾವಿಸಿರುವವರೇ  ಹೆಚ್ಚು. ಆದರೆ ಇಲ್ಲೊಬ್ಬ ಶಿಕ್ಷಕ  ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ರೂಪಿಸಲು ಪ್ರಯತ್ನಿಸುತ್ತಿದ್ದಾರೆ.

ತಾಲ್ಲೂಕಿನ ಗಡಿ ಭಾಗದ ಊರು ಗಾಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕೆ.ಎನ್.ಪುರುಷೋತ್ತಮ ಪಠ್ಯಕ್ಕಿಂತ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸುತ್ತಾರೆ.

ಪುಸ್ತಕದ ಪ್ರತಿ ಪಾಠವನ್ನು ಕಥೆ ಇಲ್ಲವೇ ಅಭಿನಯದ ಮೂಲಕ ಆರಂಭಿಸುವುದು ಇವರ ವೈಶಿಷ್ಟ್ಯ. ಪೇಪರ್, ಥರ್ಮಾಕೋಲ್‌ನಲ್ಲಿ ಪಾಠೋಕರಣ ತಯಾರಿಸುವ ಕಲೆ ಇವರಿಗೆ ಕರಗತ.

ವಾರದಲ್ಲಿ ಮೂರು ದಿನ ಯೋಗ, ಧ್ಯಾನವನ್ನು ಮಕ್ಕಳಿಂದ ಮಾಡಿ ಸುತ್ತಾರೆ. ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಮಕ್ಕಳಿಗೆ ಆಕರ್ಷಕ ಎನಿಸುವಂತೆ ಉಪನಾಮ ಇಟ್ಟು ಕೂಗುವುದು, ಆ ಮೂಲಕ ಕಲಿಕೆಯ ಬಗ್ಗೆ ಮಕ್ಕಳ ಆಸಕ್ತಿ ಕೆರಳಿಸಿ ಪಾಠ ತಲೆಗೆ ಹತ್ತುವಂತೆ ಮಾಡುತ್ತಾರೆ. ಮನೆಯಲ್ಲಿ ತಂದೆ ತನ್ನ ಮಗುವಿನ ಜತೆ ಒಡನಾಟ ಇಟ್ಟುಕೊಳ್ಳುವಂತೆ ಪುರುಷೋತ್ತಮ ಕೂಡ ಶಾಲೆಯ ಮಕ್ಕಳೆಡೆಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದಾರೆ.

ಪ್ರತಿಯಾಗಿ ಮಕ್ಕಳು ಕೂಡ ತಮ್ಮ ಮೇಷ್ಟ್ರನ್ನು ಅಕ್ಕರೆಯಿಂದ ನೋಡುತ್ತವೆ. ಶಿಕ್ಷಕ ತರಬೇತಿಯ ಜತೆಗೆ ಫಿಲಂ ಡಿಪ್ಲೊಮಾ ಪಡೆದಿರುವ ಪುರುಷೋತ್ತಮ ಕವಿತೆ ಚಿತ್ರ ಹಾಗೂ ರಚನೆಯಂತೆ ಅಭಿನಯವನ್ನೂ ಕರಗತ ಮಾಡಿಕೊಂಡಿದ್ದು, ತಮ್ಮ ಕಲೆಯಿಂದಾಗಿ ಮಕ್ಕಳ ಮನಸೂರೆಗೊಳ್ಳುತ್ತಾರೆ.

ಪ್ರಶಸ್ತಿಗಳು: ಕವಿ ಮನಸ್ಸುಳ್ಳ ಶಿಕ್ಷಕ ಪುರುಷೋತ್ತಮ ಅವರ ವಿಶಿಷ್ಟ ಸೇವೆಗೆ ಹತ್ತಾರು ಪ್ರಶಸ್ತಿಗಳು ಹುಡುಕಿ ಬಂದಿದೆ. ಶಿಕ್ಷಣ ಇಲಾಖೆಯಿಂದ 2003ರಲ್ಲಿ `ಉತ್ತಮ ಶಿಕ್ಷಕ ಪ್ರಶಸ್ತಿ~, ಮೈಸೂರು ಹೊಯ್ಸಳ ಕನ್ನಡ ಸಂಘದಿಂದ `ದಸರಾ ಕವಿ ಪ್ರಶಸ್ತಿ~, ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದಿಂದ `ಬಿಎಂಶ್ರೀ ಕಾವ್ಯ ಪುರಸ್ಕಾರ~, ಬೆಂಗಳೂರು ವಿ.ಎಫ್ ಸಂಸ್ಥೆಯಿಂದ `ಕಾವ್ಯ ಮಂದಾರ~, ಧಾರವಾಡದ ಆರೂಢ ಬೆಳಗು ಸಂಸ್ಥೆ ಯಿಂದ `ಆರೋಢ ಜ್ಯೋತಿ~ ಇತರ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ.

ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ಮತ್ತು ಮಕ್ಕಳ ಪ್ರೀತಿಯ ಕಾರಣಕ್ಕೆ ಶಾಲೆಯ ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರಿಂದ `ಇದ್ದರೆ ಇರಬೇಕು ಇಂಥ ಮೇಷ್ಟ್ರು~ ಎಂದು ಕಕ್ಕುಲತೆಯಿಂದ ಕರೆಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.