ADVERTISEMENT

ಜೆಡಿಎಸ್‌–ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾದ ಕೋಟೆನಾಡು

ಶ್ರೀರಂಗಪಟ್ಟಣ ಕ್ಷೇತ್ರ: ಅರೆಕೆರೆ ಕುಟುಂಬಗಳ ನಡುವೆ ಹಣಾಹಣಿ, ಬಿಜೆಪಿಗೆ ಕಮಲ ಅರಳುವ ವಿಶ್ವಾಸ

ಎಂ.ಎನ್.ಯೋಗೇಶ್‌
Published 4 ಮೇ 2018, 10:53 IST
Last Updated 4 ಮೇ 2018, 10:53 IST

ಮಂಡ್ಯ: ಸ್ಮಾರಕಗಳ ಬೀಡು, ಕೋಟೆನಾಡು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದ ಕಾವು ಏರತೊಡಗಿದೆ. ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಬಿಸಿಲನ್ನು ಲೆಕ್ಕಿಸದೆ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅಭ್ಯರ್ಥಿಗಳು ಮಾತ್ರವಲ್ಲದೇ ಅವರ ಕುಟುಂಬದ ಸದಸ್ಯರೂ ಕ್ಷೇತ್ರದಾದ್ಯಂತ ಮತಬೇಟೆಯಲ್ಲಿ ತೊಡಗಿದ್ದಾರೆ.

ಕ್ಷೇತ್ರ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅರೆಕೆರೆ ರಾಜಕೀಯ ಕುಟುಂಬದ ಕುಡಿಗಳ ನಡುವಿನ ಚುನಾವಣಾ ಯುದ್ಧ ಕ್ಷೇತ್ರದಲ್ಲಿ ಅಬ್ಬರ ಮೂಡಿಸಿದೆ.

ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಅವರ ಬೆಂಬಲದೊಂದಿಗೆ ಎರಡು ಚುನಾವಣೆ ಗೆದ್ದಿರುವ ರಮೇಶ್‌ ಬಂಡಿಸಿದ್ದೇಗೌಡ ಈಗ ದೇವೇಗೌಡರ ಅಂಗಳದಿಂದ ಹೊರಬಂತು ಚುನಾವಣಾ ಕಣದಲ್ಲಿ ನಿಂತಿರುವುದು ಬಹಳ ಕುತೂಹಲ ಮೂಡಿಸಿದೆ. ಜೆಡಿಎಸ್‌ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡಿರುವ ಅವರು ಶತಾಯಗತಾಯ ಈ ಚುನಾವಣೆ ಗೆಲ್ಲಲು ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ‘ಆಗಿದ್ದೆಲ್ಲಾ ಆಗಿ ಹೋಗಿದೆ, ತಪ್ಪಾಗಿದ್ದರೆ ಕ್ಷಮಿಸಿ’ ಎಂಬ ಮನವಿಯೊಂದಿಗೆ ಜನರ ಮುಂದೆ ನಿಂತಿರುವ ಅವರು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ರಮೇಶ್‌ ಬಂಡಿಸಿದ್ದೇಗೌಡ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ನಲ್ಲೇ ಇದ್ದ ರವೀಂದ್ರ ಶ್ರೀಕಂಠಯ್ಯ ಅವರನ್ನು ಕಣಕ್ಕಿಳಿಸಿದ್ದಾರೆ. ಅರೆಕೆರೆಯ ಕುಟುಂಬಗಳ ನಡೆಯುವ ಸಾಂಪ್ರದಾಯಿಕ ಚುನಾವಣಾ ಹೋರಾಟ ಮುಂದುವರಿದಿದೆ. ಆದರೆ ಈ ಬಾರಿ ಅಭ್ಯರ್ಥಿಗಳು ಅದಲು–ಬದಲು ಆಗಿದ್ದಾರಷ್ಟೇ.

ಕ್ಷೇತ್ರದ ಪಾಲಿಗೆ ಈ ಚುನಾವಣೆ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ರಮೇಶ್ ಬಂಡಿಸಿದ್ದೇಗೌಡ ಅವರ ನಡುವಿನ ಹೋರಾಟ ಎಂದೇ ಬಿಂಬಿತವಾಗಿದೆ. ಯುವ ಮತದಾರರನ್ನು ಸೆಳೆಯಲು ರವೀಂದ್ರ ಶ್ರೀಕಂಠ‌ಯ್ಯ ಕ್ಷೇತ್ರದಲ್ಲೆಡೆ ಸಂಚಾರ ಮಾಡುತ್ತಿದ್ದಾರೆ. ಕೊತ್ತತ್ತಿ ವೃತ್ತ 1, ವೃತ್ತ 2, ಕೆ.ಶೆಟ್ಟಿಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರವೀಂದ್ರ ಅತೀ ಹೆಚ್ಚು ಪ್ರಚಾರ ನಡೆಸಿದ್ದಾರೆ.

ರಮೇಶ್‌ ಬಂಡಿಸಿದ್ದೇಗೌಡ ಅವರಿಗೆ ಕಾಂಗ್ರೆಸ್‌ ಪಾಳಯದಲ್ಲಿ ಆರಂಭಿಕ ಸಮಸ್ಯೆ ಎದುರಾಗಿತ್ತು. ಕಾಂಗ್ರೆಸ್‌ ಸೇರ್ಪಡೆಯ ವಿರುದ್ಧ ಕೆ.ಎಸ್‌.ಸಚ್ಚಿದಾನಂದ ಸೇರಿ ಹಲವು ಮುಖಂಡರು ಆಕ್ಷೇಪ ಎತ್ತಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನಡೆಸಿದ ಸಂಧಾನ ಫಲ ಕೊಟ್ಟಿದ್ದು ಈಗ ಎಲ್ಲರೂ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಪಟ್ಟಣ, ಕಸಬಾ ವ್ಯಾಪ್ತಿಯಲ್ಲಿ ರಮೇಶ್‌ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ.

ಬಿಜೆಪಿಗೆ ಕೆಎಸ್‌ಎನ್‌ ಭರವಸೆ:
ಆರು ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಕಂಡಿರುವ ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಗೆ ಎರಡು ತಿಂಗಳು ಇರುವಾಗಲೇ ಕೇಸರಿ ಟವೆಲ್‌ ಧರಿಸಿದ ನಂಜುಂಡೇಗೌಡರು ಕ್ಷೇತ್ರದಲ್ಲೆಡೆ ನಿರಂತವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯ ಮಟ್ಟದ ಮುಖಂಡರಿಗೆ ಮಂಡ್ಯ ಜಿಲ್ಲೆಯಲ್ಲಿ ಖಾತೆ ತೆರೆಯಲು ಈ ಕ್ಷೇತ್ರ ಭರವಸೆಯ ಬೆಳಕಾಗಿದೆ. ಈ ನಿಟ್ಟಿನಲ್ಲಿ ಹಲವು ಮುಖಂಡರು ಬಂದು ನಂಜುಂಡೇಗೌಡರ ಪರವಾಗಿ ಪ್ರಚಾರ ನಡೆಸಿದ್ದಾರೆ.

ಕೆ.ಎಸ್‌.ನಂಜುಂಡೇಗೌಡರಿಗೆ ರೈತ ಸಮುದಾಯ ಮಾತ್ರವಲ್ಲದೆ ಹಲವು ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ. ಕಳೆದ 35 ವರ್ಷಗಳಿಂದ ರೈತರಿಗಾಗಿ ಹೋರಾಟ ನಡೆಸಿರುವ ಅವರು ತಮ್ಮ ಹೋರಾಟವನ್ನೇ ಮುನ್ನೆಲೆಗೆ ತಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ಚುನಾವಣೆಗಳಲ್ಲಿ ಕೆ.ಶೆಟ್ಟಹಳ್ಳಿ ಭಾಗದಲ್ಲಿ ಅತೀ ಹೆಚ್ಚು ಮತ ಪಡೆದಿರುವ ಅವರು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

‘ರಮೇಶ್‌ ಬಂಡಿಸಿದ್ದೇಗೌಡ ಹಾಗೂ ರವೀಂದ್ರ ಶ್ರೀಕಂಠಯ್ಯ ಅವರ ಬಗ್ಗೆ ಶ್ರೀರಂಗಪಟ್ಟಣದಲ್ಲಿ ಎಲ್ಲರಿಗೂ ಗೊತ್ತಿದೆ. ಈ ಎರಡೂ ಕುಟುಂಬಗಳು ಶ್ರೀರಂಗಪಟ್ಟಣವನ್ನು ತಲತಲಾಂತರದಿಂದಲೂ ಆಳಿವೆ. ಇವರಿಬ್ಬರ ನಡುವೆ ನಂಜುಂಡೇಗೌಡರು ಹೊಸದಾಗಿ ಕಾಣುತ್ತಿದ್ದಾರೆ. ಅವರ ಹೋರಾಟದ ಬದುಕು ರೈತರ ಗಮನ ಸೆಳೆದಿದೆ. ಅವರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ’ ಎಂದು ರೈತ ಮುಖಂಡ ಹನಿಯಂಬಾಡಿ ನಾಗರಾಜ್‌ ಹೇಳಿದರು.

**
ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಶಾಸಕನಾಗಿ ನಾನು ಮಾಡಿರುವ ಕೆಲಸಗಳು ಜನರ ಮನಸ್ಸಿನಲ್ಲಿವೆ. ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಯಲ್ಲಿ ನಾನು ಈ ಬಾರಿ ಪ್ರಚಾರ ನಡೆಸುತ್ತಿದ್ದೇನೆ. ಕ್ಷೇತ್ರದ ಬಗ್ಗೆ ಹಲವು ಕನಸುಗಳು ನನ್ನ ಮನದಲ್ಲಿವೆ
– ರಮೇಶ್‌ ಬಂಡಿಸಿದ್ದೇಗೌಡ, ಕಾಂಗ್ರೆಸ್‌ ಅಭ್ಯರ್ಥಿ

**
ಕ್ಷೇತ್ರದಾದ್ಯಂತ ಆಡಳಿತ ವಿರೋಧಿ ಅಲೆ ದಟ್ಟವಾಗಿದೆ. ಹೊಸ ಬದಲಾವಣೆಗಾಗಿ ಜನರು ತುಡಿಯುತ್ತಿದ್ದಾರೆ. ಯಾವುದೇ ಹಳ್ಳಿಗೆ ಹೋದರೂ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯಾಗುವುದು ನಿಶ್ಚಿತ
– ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್‌ ಅಭ್ಯರ್ಥಿ

**
ಪ್ರತಿನಿತ್ಯ ಜನರ ಕೈಗೆ ಸಿಗುವ ವ್ಯಕ್ತಿಯನ್ನು ಜನರು ಬಯಸುತ್ತಿದ್ದಾರೆ. ನೀರಿಗಾಗಿ, ರೈತರ ಪರವಾಗಿ ನಿಲ್ಲುವ ವ್ಯಕ್ತಿಯನ್ನು ಜನರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ಜನರು ಯಾವುದೇ ಆಮಿಷಗಳಿಗೆ ಒಳಗಾಗದೆ ಹಕ್ಕು ಚಲಾಯಿಸಬೇಕು
– ಕೆ.ಎಸ್‌.ನಂಜುಂಡೇಗೌಡ, ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.