ADVERTISEMENT

ಜೆಡಿಎಸ್‌ನ ಕೆಲವು ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:20 IST
Last Updated 11 ಫೆಬ್ರುವರಿ 2012, 10:20 IST

ಮಂಡ್ಯ: ನಗರಸಭೆಯಲ್ಲಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಆಡಳಿತರೂಢ ಜೆಡಿಎಸ್‌ನಲ್ಲಿ ಆಂತರಿಕ ಭಿನ್ನಮತ ಇನ್ನಷ್ಟು ತೀವ್ರ ಗೊಂಡಿದ್ದು, ಶುಕ್ರವಾರ ಆಡಳಿತ ಪಕ್ಷದ ಸದಸ್ಯರು ಇತರೆ ಸದಸ್ಯರ `ಬೆಂಬಲದೊಂದಿಗೆ~ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಅವರ ವಿರುದ್ಧ ಅವಿಶ್ವಾಸ ಸೂಚನೆ ಮಂಡಿಸಲು ಮುಂದಾಗಿದ್ದಾರೆ.

`ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕೂಡಲೇ ನಗರಸಭೆಯ ಸಾಮಾನ್ಯ ಸಭೆ ಕರೆಯಬೇಕು~ ಎಂದು ಮನವಿ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿಯೂ ಆಂತರಿಕ ಭಿನ್ನಮತ ಬೀದಿಗೆ ಬಂದಿದ್ದು, ಪರಸ್ಪರ ನಿಂದನೆ, ವಾಕ್ಸಮರಕ್ಕೆ ಬಹುತೇಕ ಅವಧಿಯು ಬಲಿಯಾಗಿತ್ತು. ಅಧ್ಯಕ್ಷ ಪೀಠದಲ್ಲಿ ಕುಳಿತುಕೊಳ್ಳುವ ಮೂಲಕ ಆ ಸ್ಥಾನಕ್ಕೆ ಅಪಮಾನ ಮಾಡಿದರು ಎಂಬ ಆರೋಪದ ಅಧ್ಯಕ್ಷರು ಜೆಡಿಎಸ್‌ನ ಆರು ಸದಸ್ಯರನ್ನು ಅಮಾನತು ಪಡಿಸಿದ್ದನ್ನು ಸ್ಮರಿಸಬಹುದು.

ಮಾಜಿ ಅಧ್ಯಕ್ಷೆಯೂ ಆದ ಕೆ.ಸಿ.ನಾಗಮ್ಮ, ಮಾಜಿ ಉಪಾಧ್ಯಕ್ಷರೂ ಆದ ಎಂ.ಜೆ.ಚಿಕ್ಕಣ್ಣ ಮತ್ತು ಶಂಕರೇಗೌಡ, ಎಂ.ಜೆ.ಚಿಕ್ಕಣ್ಣ, ಎಂ.ಎಲ್. ಮಂಜುನಾಥ್, ಎಂ.ಎನ್. ಚಲುವ ರಾಜು, ಜಿ.ಎಸ್.ನಾಗಮಣಿ, ಎಸ್. ಪಿ.ಗೌರೀಶ್, ಕೆ.ಸಿನಾಗಮ್ಮ, ಜಿ.ಸಿ. ನಾಗರಾಜು ಸಹಿ ಹಾಕಿದ್ದಾರೆ.

ನಗರಸಭೆ ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೆಲವು ವಿಷಯಗಳ ಬಗೆಗೆ ಸಭೆಯ ಗಮನಕ್ಕೆ ತರದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದು, ಏಕ ಪಕ್ಷೀಯವೂ ಆಗಿದೆ. ಸಾಮಾನ್ಯ ಸಭೆಯನ್ನು ವಿಳಂಬವಾಗಿ ಕರೆಯು ತ್ತಾರೆ ಎಂದು ಈ ಕುರಿತು ಸಲ್ಲಿಸಿರುವ ಮನವಿಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.