ADVERTISEMENT

ಜೇನುಕೃಷಿಯಿಂದ ಜೀವನದಲ್ಲಿ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:02 IST
Last Updated 22 ಅಕ್ಟೋಬರ್ 2017, 7:02 IST

ಕೆರಗೋಡು: ಸಮೀಪದ ಮಾರಗೌಡನಹಳ್ಳಿಯ ರೈತರೊಬ್ಬರು ತೋಟಗಾರಿಕೆ ಇಲಾಖೆ ಮಾರ್ಗದರ್ಶನದಲ್ಲಿ ಜೇನುಕೃಷಿ ಮಾಡುವ ಮೂಲಕ ತಮ್ಮದಷ್ಟೇ ಅಲ್ಲದೆ ಸುತ್ತಮುತ್ತಲಿನ ಬೆಳೆಗಳ ಇಳುವರಿಯ ಹೆಚ್ಚಳಕ್ಕೂ ಕಾರಣರಾಗಿದ್ದಾರೆ

ಗ್ರಾಮದ ರೈತ ಕಾಂತರಾಜು ಮಂಡ್ಯದ ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ 5 ವರ್ಷಗಳಿಂದಲೂ ಜೇನುಕೃಷಿ ಮಾಡುತ್ತಿದ್ದಾರೆ. ಉತ್ತಮ ಫಲಿತಾಂಶ ಕಂಡ ಬಳಿಕ ಗ್ರಾಮದಲ್ಲಿ ಜೇನುಕೃಷಿ ವಿಚಾರ ಸಂಕಿರಣ ಏರ್ಪಡಿಸಿ ರೈತರಾದ ಹುಚ್ಚಪ್ಪ, ರಾಮಚಂದ್ರ, ರವೀಂದ್ರ, ಪಾಪಣ್ಣ, ಆನಂದ್, ಶಿವಣ್ಣಗೌಡ ಮತ್ತು ನಾಗಣ್ಣ ಅವರಿಗೂ ಈ ಕೃಷಿಯ ಮಹತ್ವದ ಬಗ್ಗೆ ತಿಳಿಸಿದ್ದಾರೆ.

ಅವರೂ ಜೇನು ಕೃಷಿಯಲ್ಲಿ ತೊಡಗಲು ಪ್ರೇರೇಪಿಸಿದ್ದಾರೆ. ಇದೀಗ ಗ್ರಾಮದಲ್ಲಿ 23 ಜೇನುಪೆಟ್ಟಿಗೆಗಳ ಮೂಲಕ ಜೇನು ಕೃಷಿ ನಡೆಸಲಾಗುತ್ತಿದೆ. ‘ಜೇನು ಕೃಷಿ ನಡೆಸಲು ಜೂನ್‌ ನಿಂದ ಜನವರಿ ಉತ್ತಮ ಸಮಯ. ರಿಯಾಯಿತಿ ದರದಲ್ಲಿ ಜೇನುಪೆಟ್ಟಿಗೆ ನೀಡುತ್ತಿದ್ದೇವೆ. ಹೆಚ್ಚು ರೈತರು ಜೇನು ಕೃಷಿಯಲ್ಲಿ ತೊಡಗಿದಾಗ ಬೆಳೆ ಕೀಟ ಬಾಧೆಗೆ ತುತ್ತಾಗಿ ಹಾನಿ ಸಂಭವಿಸುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಜೇನು ಕೃಷಿ ಸಹಾಯಕ ಅಧಿಕಾರಿ ಈಶ್ವರರಾವ್.

ADVERTISEMENT

ಜೇನು ಕೃಷಿ ಮಾಡುವ ಬಗ್ಗೆ ತೋಟಗಾರಿಕೆ ಇಲಾಖೆಯವರ ಜತೆ ರೈತ ಕಾಂತರಾಜು ಸಹ ವಾರಕ್ಕೊಮ್ಮೆ ಮನೆಯಲ್ಲಿ ತರಬೇತಿ ನೀಡುತ್ತಾರೆ. ‘ಜೇನುಹುಳುಗಳು ಸಪೋಟಾ, ತೆಂಗು, ಮಾವು, ಅಡಿಕೆ ಮತ್ತು ತರಕಾರಿ ಸೇರಿದಂತೆ ಅನೇಕ ಬೆಳೆಗಳಿಗೆ ಬಾಧೆ ನೀಡುವ ಹುಳುಗಳನ್ನು ನಾಶಪಡಿಸಿ ಇಳುವರಿ ಹೆಚ್ಚಿಸುತ್ತವೆ’ ಎಂದು ಅವರು ವಿವರಿಸುತ್ತಾರೆ.
ಜೇನಿಗೆ ಮಾರುಕಟ್ಟೆಯಲ್ಲಿ ₹ 700 ಬೆಲೆ ಇದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆರ್ಗ್ಯಾನಿಕ್ ಸಂಸ್ಥೆಗಳೂ ಕೊಳ್ಳುತ್ತವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.