ADVERTISEMENT

ತಮಿಳುನಾಡು ಸರ್ಕಾರ ವಜಾಕ್ಕೆ ಒತ್ತಾಯ

ರೈತರ ಮೇಲೆ ಗೋಲಿಬಾರ್‌ ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 4:58 IST
Last Updated 25 ಮೇ 2018, 4:58 IST
ತೂತ್ತುಕುಡಿಯಲ್ಲಿ ರೈತರ ಮೇಲೆ ಗೋಲಿಬಾರ್‌ ನಡೆಸಿದ ತಮಿಳುನಾಡು ಸರ್ಕಾರವನ್ನು ವಜಾ ಮಾಡಲು ಒತ್ತಾಯಿಸಿ ಮಂಡ್ಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದ ರೈತಸಂಘದ ಕಾಯರ್ಕತರು ಪ್ರತಿಭಟನೆ ನಡೆಸದರು
ತೂತ್ತುಕುಡಿಯಲ್ಲಿ ರೈತರ ಮೇಲೆ ಗೋಲಿಬಾರ್‌ ನಡೆಸಿದ ತಮಿಳುನಾಡು ಸರ್ಕಾರವನ್ನು ವಜಾ ಮಾಡಲು ಒತ್ತಾಯಿಸಿ ಮಂಡ್ಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದ ರೈತಸಂಘದ ಕಾಯರ್ಕತರು ಪ್ರತಿಭಟನೆ ನಡೆಸದರು   

ಮಂಡ್ಯ: ತಮಿಳುನಾಡಿನ ತೂತ್ತುಕುಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್‌ ನಡೆಸಿ 13 ಜನರ ಸಾವಿಗೆ ಕಾರಣವಾಗಿರುವ ತಮಿಳುನಾಡು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ತೂತ್ತುಕುಡಿಯ ಸ್ಟೆರ್‌ಲೈಟ್‌ ಕಾರ್ಖಾನೆಯ ಮಲಿನಯುಕ್ತ ನೀರನ್ನು ನದಿಗೆ ಬಿಡುತ್ತಿದ್ದುದರಿಂದ ಕುಡಿಯುವ ನೀರು, ಅಂತರ್ಜಲ ಮಲಿನವಾಗಿತ್ತು. ಕೃಷಿ ಭೂಮಿ ಬಂಜರಾಗಿ ಬೆಳೆ ಬೆಳೆಯಲು ಅಯೋಗ್ಯವಾಗಿತ್ತು. ಇದರ ವಿರುದ್ಧ ರೈತರು ಕಳೆದ 100 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರ ಪ್ರತಿಭಟನಾನಿರತ ರೈತರ ಮೇಲೆ ಗುಂಡು ಹಾರಿಸುವ ಮೂಲಕ 13 ರೈತರ ಸಾವಿಗೆ ಕಾರಣವಾಗಿದೆ. ರೈತರ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಅವರನ್ನು ಕೊಲೆ ಮಾಡಿದೆ. ಆ ಸರ್ಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು. ಕೂಡಲೇ ರಾಷ್ಟ್ರಪತಿಗಳು ತಮಿಳುನಾಡು ಸರ್ಕಾರವನ್ನು ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜೆ.ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ಟೆರ್‌ಲೈಟ್‌ ಕಾರ್ಖಾನೆಗೆ ಅನುಮತಿ ನೀಡಿರಲಿಲ್ಲ. ಅವರು ಮೃತಪಟ್ಟ ನಂತರ ಕಾರ್ಖಾನೆಯು ಅಕ್ರಮವಾಗಿ ಪರಿಸರ ಇಲಾಖೆಯ ಅನುಮೋದನೆ ಪಡೆದು ಕಾರ್ಯಾರಂಭ ಮಾಡಿತ್ತು. ಕಾರ್ಖಾನೆಯ ಸಮೀಪದಲ್ಲಿ ವಾಸಿಸುವ ಸಾರ್ವಜನಿಕರಿಗೆ, ಮಕ್ಕಳಿಗೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಇದನ್ನು ಖಂಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ಕಾರ್ಯ ನಾಚಿಕೆಗೇಡಿನ ಸಂಗತಿ. ಕೂಡಲೇ ತಮಿಳುನಾಡು ಸರ್ಕಾರ ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ತಮಿಳುನಾಡಿನ ರೈತರ ಜೊತೆ ನಾವು ಇದ್ದೇವೆ. ರೈತರ ಮೇಲೆ ದೇಶದಾದ್ಯಂತ ದಬ್ಬಾಳಿಕೆ ನಡೆಯುತ್ತಿದೆ. ಜಗತ್ತಿಗೆ ಅನ್ನ ಕೊಡುವ ರೈತನನ್ನು ಸರ್ಕಾರಗಳು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಗುಂಡು ಹಾರಿಸಿ ರೈತರನ್ನು ಕೊಲ್ಲುವಂತಹ ಮಟ್ಟಕ್ಕೆ ಸರ್ಕಾರಗಳು ಇಳಿದಿರುವುದು ದುರದೃಷ್ಟಕರ. ಇದು ರೈತರ ಮೇಲಾಗುತ್ತಿರುವ ಬಹುದೊಡ್ಡ ಅನ್ಯಾಯವಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಖಂಡನೆ ಮಾಡಬೇಕು ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌, ಪ್ರಧಾನ ಕಾರ್ಯದರ್ಶಿ ಬೊಮ್ಮೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ, ಸಿದ್ದೇಗೌಡ, ಲತಾ ಶಂಕರ್‌, ಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.