ADVERTISEMENT

ತಾ.ಪಂ ಅಧ್ಯಕ್ಷೆ ವಿರುದ್ಧ ಸದಸ್ಯರ ಧಿಕ್ಕಾರ

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ–ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:23 IST
Last Updated 25 ಸೆಪ್ಟೆಂಬರ್ 2013, 8:23 IST

ಮಂಡ್ಯ: ಕೆಲ ಸದಸ್ಯರ ತೀವ್ರ ವಿರೋಧ ಹಾಗೂ ಸಭಾತ್ಯಾಗದ ನಡುವೆ ಯಾವುದೇ ಚರ್ಚೆ ಇಲ್ಲದೆ, ಸುಮಾರು 3 ಕೋಟಿ ರೂ. ಹೆಚ್ಚಿನ ಕ್ರಿಯಾ­ಯೋಜನೆಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅನುಮೋದನೆ ನೀಡಿತು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಕೆ.ಹೇಮಲತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿದೆ ಎಂದು ದೂರಿದ ಒಂಬತ್ತು ಮಂದಿ ಸದಸ್ಯರು, ಅಧ್ಯಕ್ಷರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಸಭೆಯಿಂದ ಹೊರ­ನಡೆದರು.

2013–14ನೇ ಸಾಲಿನ ಲಿಂಕ್‌ ಡಾಕ್ಯುಮೆಂಟ್‌ ರೀತಿ ನಿಗದಿಯಾದ ಅನುದಾನ, 2010–11ನೇ ಸಾಲಿನ ಅದಿಭಾರ ಶುಲ್ಕ ಹಾಗೂ 2011–12 ಮತ್ತು 2012–13ನೇ ಸಾಲಿನಲ್ಲಿ 13ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲು ಸಭೆ ಕರೆಯಲಾಗಿತ್ತು.

‘ತಯಾರಿಸಿರುವ ಕ್ರಿಯಾ ಯೋಜನೆ ಪಟ್ಟಿಗಳಿಗೆ ಅನುಮೋದನೆ ನೀಡುವ ಬಗೆಗೆ’ ಎಂಬ ಸಾಲುಗಳು ಹಾಗೂ ಅಧ್ಯಕ್ಷೆ ಹೇಮಲತಾ ಅವರ ‘ಹೊರ ಹೋಗಿ’ ಎಂಬ ಮಾತುಗಳು ಸದಸ್ಯ­ರನ್ನು ಕೆರಳಿಸಿತ್ತಲ್ಲದೇ, ಸಭಾತ್ಯಾಗಕ್ಕೂ ಕಾರಣವಾಯಿತು.

‘ಕೋರಂ ಇದೆ ಎನ್ನುವ ಕಾರಣಕ್ಕೆ ಅನುಕೂಲಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸಿದ್ದು, ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ’ ಎಂದು ಆರೋಪಿಸಿ ಸದಸ್ಯರಾದ ಕೆ.ಟಿ.­ಧನು­ಕುಮಾರ್, ಎಚ್.ಸಿ.ಶಾಂತಾ, ಸವಿತಾ, ವಿಜಯಮಣಿ, ಎಚ್.ಸಿ.­ಪ್ರಭಾವತಿ, ಸುನೀತಾ, ಎಚ್.ರಮೇಶ್‌, ಜವರೇ­ಗೌಡ ಸಭೆಯಿಂದ ಹೊರ­ನಡೆದರು.

ನಡೆದಿದ್ದೇನು?: ಸದಸ್ಯರಿಗೆ ಸಭೆ ತಿಳವಳಿಕೆ ಪತ್ರವನ್ನು ಕಳುಹಿಸುವಾಗ ಹಿಂದಿನ ಸಭೆಗಳ ನಡವಳಿಗಳನ್ನು ಕಳುಹಿಸಬೇಕು. ಅದರ ಜೊತೆಗೆ ‘ತಯಾರಿಸಿದ’ ಕ್ರಿಯಾ­ಯೋಜನೆ­ಯನ್ನೂ ಕಳುಹಿಸಬೇಕಿತ್ತು. ಏಕೆ ತಲುಪಿಸಿಲ್ಲ. ಅಧ್ಯಕ್ಷರ ಗಮನಕ್ಕಿದು, ಬರಲಿಲ್ಲವೇ ಎಂದು ಧನುಕುಮಾರ್‌, ಶಾಂತಾ, ಎಚ್‌.ರಮೇಶ್‌ ತರಾಟೆ ತೆಗೆದುಕೊಂಡರು.

ಅಧ್ಯಕ್ಷತೆ ಹೇಮಲತಾ, ‘ನಿನ್ನೆ ಸಂಜೆಯಷ್ಟೇ ಕ್ರಿಯಾಯೋಜನೆ ಪಟ್ಟಿ ಸಿದ್ಧಗೊಂಡಿದೆ’ ಎಂದು ಹೇಳಿದರು. ‘ನಿನ್ನೆ ಯಷ್ಟೇ ಕ್ರಿಯಾಯೋಜನೆ ಅಂತಿಮಗೊಂಡಿದೆ ಎಂದು ಹೇಳುತ್ತಿ­ರುವ ನೀವು ಸಭಾ ತಿಳವಳಿಕೆ ಪತ್ರದಲ್ಲಿ ಈಗಾಗಲೇ ತಯಾರಿಸಲಾಗಿರುವ ಕ್ರಿಯಾಯೋಜನೆ ಎಂದು ಬರೆದಿದ್ದೇಕೆ’ ಎಂದು ಪ್ರಶ್ನಿಸಿದರು.

ಕಳೆದ ವಿಶೇಷ ಸಭೆಯಲ್ಲಿ ಸಮನಾಗಿ ಅನುದಾನ ಹಂಚಿಕೆ ಮಾಡುವಂತೆ ಹೇಳಿದ್ದರೂ, ಅಧ್ಯಕ್ಷರ ವಿವೇಚನೆಗೆ ಅಧಿಕಾರ ನೀಡಲಾಗಿದೆ ಎಂದು ದಾಖಲಿಸಿ ಹೇಳಿಕೆಯನ್ನೇಕೆ ತಿರುಚಿದ್ದೀರಿ. ಕ್ರಿಯಾಯೋಜನೆ ತಯಾ­ರಿ­ಸು­ವಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು­ಕೊಂಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಇದನ್ನು ತಯಾರಿಸಿಲ್ಲ. ಸಭೆಯನ್ನು ಮುಂದೂಡಿ’ ಎಂದು ಶಾಂತಾ, ರಮೇಶ್‌, ಜವರೇಗೌಡ, ಧನು­ಕುಮಾರ್‌ ತೀವ್ರ ವಾಗ್ದಾಳಿ ನಡೆಸಿದರು.

‘ಕ್ರಿಯಾಯೋಜನೆ ಪಟ್ಟಿಗೆ ಅನು­ಮೋದನೆ ನೀಡಲು ನಿಮಗೆ ಇಷ್ಟ­ವಿಲ್ಲದಿದ್ದರೆ ಹೊರಗೆ ಹೋಗಬಹುದು' ಎಂದು ಹೇಮಲತಾ ಹೇಳಿದ ಮಾತು­ಗಳಿಂದ ಕೆರಳಿದ ಸದಸ್ಯರು ಅಧ್ಯಕ್ಷೆ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಹೊರನಡೆದರು.

ಸದಸ್ಯೆ ಸುಮಾ ಮಾತನಾಡಿ, ‘ಈ ಸದಸ್ಯರದು ಇದೇ ಕಿತಾಪತಿ. ಕಳೆದ ವರ್ಷವೂ ಅನುದಾನ ವಾಪಸ್ಸು ಹೋಯಿತು’ ಎಂದು ಕಿಡಿಕಾರಿದರು. ಸದಸ್ಯರಾದ ರಘು, ಉಪಾಧ್ಯಕ್ಷ ತ್ಯಾಗರಾಜು ‘ಇವರು ಬೇಕೆಂತಲೇ ವಿರೋಧ ಮಾಡುತ್ತಿದ್ದಾರೆ. ಹೀಗೆ ಮಾಡಿದರೆ ಕಾಮಗಾರಿಗಳು ಬೇಗನೆ ನಡೆಯುವುದಿಲ್ಲ. ಹೋದರೆ ಹೋಗಲಿ. ನಾವೇ ಸಭೆ ನಡೆಸೋಣ’ ಎಂದರು. ಸಭೆ ಮುಂದುವರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.