ADVERTISEMENT

ತುಕ್ಕು ಹಿಡಿದ ನೀರು ಸರಬರಾಜು ಪೈಪ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 5:55 IST
Last Updated 15 ಜೂನ್ 2012, 5:55 IST

ಪಾಂಡವಪುರ: ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿನ ಪೈಪ್ ತುಕ್ಕುಹಿಡಿದು ರಂಧ್ರವಾಗಿದ್ದರೂ ಸರಿಪಡಿಸಿದ ಕಾರಣ ಮೂರು ದಿನಗಳಿಂದ ಕಲುಷಿತ ನೀರು ಕುಡಿದ ಗ್ರಾಮದ 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾ ಗುತ್ತಿರುವುದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

ಮೂರು ದಿನಗಳಿಂದ ಮಕ್ಕಳು ಮಹಿಳೆಯರೂ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ ಗ್ರಾಮದ ಕಿರಣ್, ಮಲ್ಲಿಕಾರ್ಜುನ, ಭಾಗ್ಯಮ್ಮ, ಶಕುಂತಲಾ, ಮಂಜುಳ, ಮಂಜುನಾಥ್, ಸತೀಶ್, ಜಯರಾಮ್, ಜಯಮ್ಮ, ಶಾಂತ, ಪ್ರವೀಣ್‌ಕುಮಾರ್, ಸ್ವಾಮಿಶೆಟ್ಟಿ, ಪುಟ್ಟಮ್ಮ, ಶಿವಕುಮಾರ್, ಜಗದೀಶ್ ಸೇರಿದಂತೆ ಕೆಲವರು ಮೈಸೂರಿನ ಇಡಿ ಆಸ್ಪತ್ರೆಯಲ್ಲಿ ಮತ್ತೆ ಕೆಲವರು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚರಂಡಿ ನೀರು ಸೇರ್ಪಡೆ: ಗ್ರಾಮದಲ್ಲಿರುವ ಕುಡಿಯುವ ನೀರಿನ ಸರಬರಾಜಿನ ಪೈಪ್‌ಲೈನ್ ತುಕ್ಕುಹಿಡಿದು ಸಣ್ಣರಂಧ್ರವಾಗಿದ್ದರೂ ಅಧಿಕಾರಿಗಳು ಗಮನಿಸದೆ ಇದ್ದುದರಿಂದ ಚರಂಡಿನೀರು ಪೈಪ್‌ಲೈನ್‌ಗೆ ಸೇರಿದ್ದರಿಂದ ಕುಡಿಯುವ ನೀರು ಕಲ್ಮಷವಾಗಿದೆ. ಈ ನೀರನ್ನೆ ಕುಡಿದ ಜನರು ಅಸ್ವಸ್ಥರಾಗಿ ಅಸ್ಪತ್ರೆ ಸೇರಿದ್ದಾರೆ.

ಸ್ವಚ್ಛತೆಯ ಕೊರತೆ: ಗ್ರಾಮದೊಳಗಡೆಯೇ ತಿಪ್ಪೆಗುಂಡಿಗಳು ರಾಶಿ ರಾಶಿಯಾಗಿ ಬಿದ್ದಿದ್ದು ಇದರ ವಿಲೇವಾರಿಗೆ ಗ್ರಾಮಪಂಚಾಯಿತಿ ಮುಂದಾಗಿಲ್ಲ. ಎಲ್ಲೆಡೆ ಅನ್ಯೆರ್ಮಲ್ಯ ತಾಂಡವವಾಡುತ್ತಿದೆ. ಚರಂಡಿಗಳನ್ನು ಸ್ವಚ್ಚಗೊಳಿಸಿ ಹಲವು ದಿನಗಳೇ ಆಗಿರುವುದರಿಂದ ಗಬ್ಬುವಾಸನೆ ಬೀರುತ್ತಿದೆ. ಕುಡಿಯುವ ನೀರಿನ ಟ್ಯಾಂಕ್ ಸ್ಚಚ್ಛತೆಯ ಭಾಗ್ಯ ಕಂಡಿಲ್ಲ.

ಕ್ರಮಕ್ಕೆ ಒತ್ತಾಯ
ಗ್ರಾಮ ಪಂಚಾಯಿತಿಯ ಬೇಜಾವಾಬ್ದಾರಿತನದಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಸರಿಪಡಿಸದೆ ಹಾಗೂ ಚರಂಡಿಗಳನ್ನು ಸ್ವಚ್ಚತೆಗೊಳಿಸದೆ ಇದ್ದುದರಿಂದ ಕಲುಷಿತ ನೀರನ್ನು ಕುಡಿದ ಜನರು ಅಸ್ವಸ್ಥರಾಗಬೇಕಾಗಿ ಬಂತು ಎಂದು ಗ್ರಾಮಸ್ಥರಾದ ಅರುಣ್‌ಕುಮಾರ್, ರವಿ. ಚಲುವೇಗೌಡ, ಜಯಮ್ಮ, ಸಾವಿತ್ರಮ್ಮ ಸೇರಿದಂತೆ ಅನೇಕರು ದೂರಿದ್ದಾರೆ.

ಯುವಕ ನೇಣಿಗೆ ಶರಣು
ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಹಾರೋಹಳ್ಳಿ ಗ್ರಾಮದ ಹೇಮಾವತಿ ಬಡಾವಣೆಯ ನಿವಾಸಿ ನಾರಾಯಣಗೌಡ ಅವರ ಪುತ್ರ ರವಿ (28) ಎಂಬುವರೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದೆ ವೇಳೆಯಲ್ಲಿ ಮನೆಯ ಹಿಂಭಾಗದಲ್ಲಿದ್ದ ಬೇವಿನ ಮರಕ್ಕೆ ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ಶರಣಾಗಿರುವ ರವಿ ಕಳೆದ ಮೇ 24ರಂದು ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮದ ಕಾಳೇಗೌಡ ಅವರ ಪುತ್ರಿ ದಿವ್ಯರನ್ನು ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಕರಣ ಪೊಲೀಸ್‌ಠಾಣೆಯಲ್ಲಿ ದಾಖಲಾಗಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.