ADVERTISEMENT

ತೂಬಿನಕೆರೆ ಸ್ನಾತಕೋತ್ತರ ಕೇಂದ್ರದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 6:52 IST
Last Updated 30 ನವೆಂಬರ್ 2017, 6:52 IST

ಮಂಡ್ಯ: ನಗರದ ಹೊರವಲಯದ ತೂಬಿನಕೆರೆಯಲ್ಲಿರುವ ಮೈಸೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಎಚ್‌.ಆರ್‌.ಉಮಾ ಅವರ ಸರ್ವಾಧಿಕಾರಿ ಧೋರಣೆಯಿಂದ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣ ಹಾಳಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಬುಧವಾರ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳು ಯಾವುದೇ ಚಟುವಟಿಕೆ ನಡೆಸಿದರೂ ಉಮಾ ಅವರು ಗೈರು ಹಾಜರಾಗುತ್ತಾರೆ. ನಾವು ಈಚೆಗೆ ಕಾಲೇಜಿನಲ್ಲಿ ಕೆಂಪೇಗೌಡ ಜಯಂತಿ, ಬಸವ ಜಯಂತಿ ಹಾಗೂ ಕನಕದಾಸ ಜಯಂತಿ ಆಚರಣೆ ಮಾಡಿದೆವು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಕಾರ್ಯಕ್ರಮ ಆಯೋಜನೆ ಮಾಡಿದ ವಿದ್ಯಾರ್ಥಿಗಳ ಆಂತರಿಕ ಪರೀಕ್ಷೆ ಅಂಕ ಕಡಿತ ಮಾಡುವ ಹಾಗೂ ದಾಖಲಾತಿಯನ್ನು ರದ್ದು ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಉಮಾ ಅವರ ವರ್ತನೆ ವಿರುದ್ಧ ಜಿಲ್ಲೆಯ ಸಂಸದರಾದ ಸಿ.ಎಸ್‌.ಪುಟ್ಟರಾಜು ಅವರಿಗೆ ದೂರು ಸಲ್ಲಿಸಿದ್ದೆವು. ಸಂಸದರು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಎಸ್‌.ಮಹಾದೇವಪ್ಪ ಅವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಬಸವರಾಜ ರಾಯರಡ್ಡಿ ಹಾಗೂ ಎಂ.ಕೃಷ್ಣಪ್ಪ ಅವರು ಮೈಸೂರು ವಿವಿ ಕುಲಸಚಿವರಿಗೆ ಪತ್ರ ಬರೆದು ಉಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ. ಇಷ್ಟಾದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿಗಳು ಪತ್ರಗಳನ್ನು ಪ್ರದರ್ಶನ ಮಾಡಿದರು.

ADVERTISEMENT

ಪ್ರತಿಭಟನೆ ನಡೆಸಿದರೆ ಕಾಲೇಜಿನ ಗೇಟ್‌ ಮುಚ್ಚಿಸಿ ಬೀಗ ಹಾಕಿಸುತ್ತಾರೆ. ಪೋಷಕರ ಭೇಟಿಗೂ ಅವಕಾಶ ಕೊಡುವುದಿಲ್ಲ. ಶೀಘ್ರ ಮೈಸೂರು ವಿಶ್ವವಿದ್ಯಾಲಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಹೆಸರು ಪ್ರಕಟಿಸದಂತೆ ಮನವಿ ಮಾಡಿದರು. ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರೊ.ಉಮಾ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.