ADVERTISEMENT

ದಲಿತರಿಗೆ ಕ್ಷೌರ: ಪ್ರಕರಣ ಸುಖಾಂತ್ಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 7:05 IST
Last Updated 22 ಅಕ್ಟೋಬರ್ 2011, 7:05 IST

ಮಂಡ್ಯ: ದಲಿತರು ಮತ್ತು ಸವಿತಾ ಸಮಾಜ ಇಬ್ಬರೂ ಹಿಂದುಳಿದ ಸಮುದಾಯಗಳೇ ಆಗಿದ್ದು, ಒಡಕು ಮೂಡಿಸಲು ಪ್ರಚೋದನೆ ಮಾಡುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಬಲಿಯಾಗದೇ ಒಮ್ಮತ ಕಾಯ್ದುಕೊಳ್ಳಬೇಕು ಎಂದು ಶುಕ್ರವಾರ ನಗರದಲ್ಲಿ ನಡೆದ ದಲಿತ-ಸವಿತಾ ಸಮಾಜದ ಸಾಮರಸ್ಯ ಸಮಾವೇಶ ಸಲಹೆ ಮಾಡಿದೆ.

ಜಿಲ್ಲೆಯ ಕಿರುಗಾವಲಿನಲ್ಲಿ ಈಚೆಗೆ ಕ್ಷೌರ ಮಾಡಿಸಲು ಹೋಗಿದ್ದ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಯಿತು ಎಂಬ ಘಟನೆಯ ಹಿನ್ನೆಲೆಯಲ್ಲಿ ಉಭಯ ಸಮಾಜದ ನಡುವೆ ಒಮ್ಮತ ಮೂಡಿಸುವ ಉದ್ದೇಶದಿಂದ ಸವಿತಾ ಸಮಾಜ ಮೀಸಲಾತಿ ಒಕ್ಕೂಟ ಈ ಸಮಾವೇಶವನ್ನು ಆಯೋಜಿಸಿತ್ತು.

ದಲಿತ ಸಮುದಾಯದ ವ್ಯಕ್ತಿಗೆ ವೇದಿಕೆಯಲ್ಲಿಯೇ ಕ್ಷೌರಮಾಡುವ ಮೂಲಕ ನಾವು ದಲಿತರಿಗೆ ಕ್ಷೌರ ಮಾಡಲು ನಿರಾಕರಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ ಸವಿತಾ ಸಮಾಜದ ಮುಖಂಡರು, ದಲಿತರಿಗಿಂತಲೂ ಹಿಂದುಳಿದಿರುವ ಸವಿತಾ ಸಮಾಜವನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಮಂಡಿಸಿದರು.

ಈ ಸಾಮರಸ್ಯ ಮೂಡಿಸುವ ಈ ಕಾರ್ಯಕ್ರಮಕ್ಕೆ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಉಭಯ ಸಮಾಜದ ಮುಖಂಡರು ಸಾಕ್ಷಿಯಾದರು.
ಸಿದ್ದರಾಮಯ್ಯ ಮಾತನಾಡಿ, `ಇಂಥ ಘಟನೆಗಳು ಮೇಲಿಂದ ಮೇಲೆ ಆಗುತ್ತಿವೆ ಎಂಬುದೇ ಸಮಾಜದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರುಬಿಟ್ಟಿದೆ. ಅಸ್ಪೃಶ್ಯತೆ ಇದೆ ಎಂಬುದಕ್ಕೆ ಸಾಕ್ಷಿ. ಸಮಾಜ ಬದಲಾವಣೆ ಆಗಿಲ್ಲ ಎಂದು ಯಾರಿಗಾದರೂ ಅನ್ನಿಸಲಿದೆ~ ಎಂದರು.

ಇಂಥ ಘಟನೆಗಳು ಉಳಿದಿರುವುದಕ್ಕೆ ಜಾತಿ ವ್ಯವಸ್ಥೆ ಹುಟ್ಟುಹಾಕಿದವರು ತಲೆತಗ್ಗಿಸಬೇಕು. ಸವಿತಾ ಸಮಾಜ, ದಲಿತರು ಹಿಂದುಳಿದವರೇ ಆಗಿದ್ದು, ಈ ವರ್ಗ ಒಂದಾಗದೇ ಪರಿಸ್ಥಿತಿ ಬದಲಿಸಲು ಆಗುವುದಿಲ್ಲ. ನಮಗೆ ನಾವೇ ಭೇದ ಮಾಡಿಕೊಳ್ಳುವುದು ಬೇಡ. ಬದಲಾಗಿ ಒಗ್ಗೂಡಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡೋಣ ಎಂದು ಕರೆ ನೀಡಿದರು.

ಶಾಸಕ ವಿ.ಶ್ರೀನಿವಾಸ್‌ಪ್ರಸಾದ್ ಮಾತನಾಡಿ,  ಕಿರುಗಾವಲು ಘಟನೆ ಹಿಂದೆ ಕೆಲವರ ಪ್ರಚೋದನೆ ಯೂ ಇರಬಹುದು. ಮನುಷ್ಯ ಇನ್ನೊಬ್ಬ ಮನುಷ್ಯನ ನ್ನು ಪ್ರೀತಿಸುವ ಪರಿಸ್ಥಿತಿ ನಿರ್ಮಾಣ ಆಗುವವರೆಗೂ ಇಂಥ ಘಟನೆಗಳು ಮರೆಯಾಗುವುದಿಲ್ಲ ಎಂದರು.

ಜಾತಿ ವ್ಯವಸ್ಥೆ ಬೇರುಬಿಟ್ಟಿರುವುದರ ಬಗೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಅವರು, ಮಂಡ್ಯದಂಥ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯವಾದಾಗ ಅದನ್ನು ಬಲವಾಗಿ ಖಂಡಿಸುವ ದನಿಗಳು ಇಲ್ಲವಾಗಿದೆ ಎಂದು ವಿಷಾದಿಸಿದರು.

ಸವಿತಾ ಸಮಾಜವನ್ನು ಪ್ರವರ್ಗ-1ರ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಉಲ್ಲೇಖಿಸಿ, ಈ ಕುರಿತು ಹಿಂದುಳಿದ ವರ್ಗದ ಆಯೋಗದ ಎದುರು ಪ್ರಸ್ತಾಪ ಮಾಡಬಹುದು ಎಂದು ಸಹಮತ ವ್ಯಕ್ತಪಡಿಸಿದರು.

ಸವಿತಾ ಸಮಾಜದ ಮೀಸಲು ಹೋರಾಟದ ಅಧ್ಯಕ್ಷ ಎಂ.ಬಿ.ಶಿವಕುಮಾರ್ ಅವರು,  ಸವಿತಾ ಸಮಾಜದರು ತೀರಾ ಹಿಂದುಳಿದಿದ್ದು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ವರ್ಗವನ್ನು ಎಸ್‌ಸಿ ವರ್ಗಕ್ಕೆ ಸೇರಿಸಬೇಕು. ಸರ್ಕಾರಿಮಳಿಗೆಗಳಲ್ಲಿ ಕ್ಷೌರಿಕರಿಗಾಗಿ ಯೇ ಮಳಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡರಾದ ಡಾ. ಅನ್ನದಾನಿ, ಎಂ.ಬಿ.ಶ್ರೀನಿವಾಸ್ ಅವರು, ಸವಿತಾ ಸಮಾಜದವರು ದಲಿತರಿಗೂ ಯಾವುದೇ ಭಿನ್ನಮತ ಎಣಿಸದೇಸೇವೆ ಸಲ್ಲಿಸುವ ಮೂಲಕ ಮನುಷ್ಯರಂತೆ ಕಾಣಬೇಕು ಎಂದರು.

ಕಾರ್ಯಕ್ರಮದಲ್ಲಿ ಕೇಳಿದ್ದು..
ಸವಿತಾ ಸಮಾಜದ ಮೀಸಲಾತಿ ವಿಷಯ ಪ್ರಸ್ತಾಪಿಸೋಣ ಎಂದರೆ ಈ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ. ಮೊದಲು ಎಲ್ಲ ಹಿಂದುಳಿದ ವರ್ಗಗಳು ಒಟ್ಟಾಗಿ ಹೋರಾಡೋಣ. ನಮ್ಮ ನಡುವಯೇ ಭಿನ್ನಾಭಿಪ್ರಾಯ ಬೇಡ.
-ಸಿದ್ದರಾಮಯ್ಯ,  ವಿಧಾನಸಭೆ ವಿರೋಧಪಕ್ಷದ ನಾಯಕ.

ಕ್ಷೌರಮಾಡಲು, ತಲೆಗೆ ಎಣ್ಣೆ ಹಾಕಲು, ಬಟ್ಟೆ ಒಗೆಯಲು, ಚಪ್ಪಲಿ ಹೊಲಿಯಲೂ ಒಂದೊಂದು ಜಾತಿ ಇದೆ. ಈ ದಿನಗಳಲ್ಲಿಯೂ ಇಂಥ ವ್ಯವಸ್ಥೆ ಇರುವುದೇ ಅಪಮಾನಕರ.
-ಶ್ರೀನಿವಾಸಪ್ರಸಾದ್, ಶಾಸಕ.

ದಲಿತರು ನೊಂದವರು. ನಾವು ಬೆಂದವರು. ಆಡುಮುಟ್ಟದ ಸೊಪ್ಪಿಲ್ಲ, ನಾವು ಮುಟ್ಟದ ಜನರಿಲ್ಲ. ನಮಗೂ ಎಸ್‌ಸಿ ವರ್ಗಕ್ಕೆ ಸೇರಿಸಿ.
-ಎಂ.ಬಿ.ಶಿವಕುಮಾರ್, ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ಅಧ್ಯಕ್ಷ.

ADVERTISEMENT

ಮೀಸಲಾತಿ ಎಂಬುದು ಕಡಲೆಪುರಿಯಂತೆ ಆಗಿದೆ. ಎಲ್ಲರೂ ಎಸ್‌ಸಿ ವರ್ಗಕ್ಕೆ ಸೇರಿಸಿ ಎಂದರೆ ಹೇಗೆ? ಈಗಲೇ ಎಸ್‌ಸಿ ಪಟ್ಟಿಯಲ್ಲಿ 101 ಜಾತಿಗಳಿವೆ. ಮೊದಲು ಇರುವ ಜಾತಿಗಳಿಗೆ ಸರಿಯಾದ ಸೌಲಭ್ಯ ಸಿಗಲಿ.
ಎಂ.ಬಿ.ಶ್ರೀನಿವಾಸ್, ದಸಂಸ ಮುಖಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.