ADVERTISEMENT

ದಸರಾಗೆ ಸ್ವಾಗತ ಕೋರುವ ಈ ಪರಿ..

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 11:25 IST
Last Updated 26 ಸೆಪ್ಟೆಂಬರ್ 2011, 11:25 IST

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಆರಂಭಕ್ಕೆ ನಾಲ್ಕೈದು ದಿನಗ ಳಷ್ಟೇ  ಬಾಕಿ ಇದ್ದು, ಈ ಬಾರಿ ದಸರಾ ಗಾಗಿ ಬಿಡುಗಡೆ ಆಗಿರುವ ಮೊತ್ತ 50 ಲಕ್ಷ ಆಗಿರುವ ಹಿನ್ನೆಲೆಯಲ್ಲಿ ಅದ್ಧೂರಿ ತನಕ್ಕೆ ಕೊರತೆ ಆಗದು.
ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಜಿಲ್ಲೆ ಮಟ್ಟಿಗೆ ಶ್ರೀರಂಗಪಟ್ಟಣ ದಸರಾ ಮೈಸೂರು ದಸರಾದಷ್ಟು ಖ್ಯಾತಿ ಪಡೆಯದಿದ್ದರೂ ಜನಾಕರ್ಷಣೆಯಲ್ಲಿ ಹಿಂದೆ ಬಿದ್ದಿಲ್ಲ.

ಎರಡೂ ದಸರಾ ಕಾರ್ಯಕ್ರಮಳಿಗೆ ರಾಜಧಾನಿಯಿಂದ ಬರುವ ಪ್ರವಾಸಿಗರಿಗೆ ಮೈಸೂರು-ಬೆಂಗಳೂರು ಹೆದ್ದಾರಿಯೇ  ಮುಖ್ಯ ಮಾರ್ಗ. ಹಾಗೇ ಸಾಗುವ ಪ್ರವಾಸಿಗಳು ಜಿಲ್ಲಾ ಕೇಂದ್ರವನ್ನು ದಾಟಿಯೇ ಹೋಗಬೇಕು.

ಅದ್ದೂರಿತನದ ದಸರಾಗೆ ಸಾಕ್ಷಿಯಾಗುವ ಮುನ್ನ ಪ್ರವಾಸಿಗರಿಗೆ ನಗರದ ಸೌಂದರ್ಯವನ್ನು `ಸವಿಯಬೇಕಾದ~  ಅನಿವಾರ್ಯತೆ ಇದೆ. ಶ್ರೀರಂಗ ಪಟ್ಟಣದ ದಸರಾ ಆಚರಣೆಗೆ ಒತ್ತು ನೀಡಬೇಕು ಎಂಬುದು ಸರಿ. ಅದೇ ಸಮಯದಲ್ಲಿ ನಗರದಲ್ಲಿ ಕನಿಷ್ಠ ಹೆದ್ದಾರಿಯನ್ನಾದರೂ ಸೌಂದರ್ಯ ಕಾಪಾಡಿಕೊಳ್ಳಲು ಆಸಕ್ತಿಯನ್ನು ಜಿಲ್ಲಾಡಳಿತವಾಗಲಿ, ನಗರಸಭೆಯಾಗಲಿ ತೋರುತ್ತಿಲ್ಲ.

ಹುಟ್ಟಿದ ಹಬ್ಬಕ್ಕೆ ತಿಂಗಳುಗಟ್ಟಲೆ ರಾರಾಜಿಸುವ ಶುಭಾಶಯದ ಫ್ಲೆಕ್ಸ್‌ಗಳು, ರಾಜಕೀಯ ಉದ್ದೇಶದ ಫ್ಲೆಕ್ಸ್‌ಗಳು, ಶುಭಹಾರೈಕೆಯ ಫ್ಲೆಕ್ಸ್‌ಗಳು, ರಸ್ತೆ ಬದಿಯ ಗೋಡೆಯಲ್ಲಿ ಸರ್ಕಾರಿ ಕಚೇರಿಗಳ ಎದುರು ರಾರಾಜಿಸುವ ಭಿನ್ನ ಚಲನಚಿತ್ರ ಭಿತ್ತಿಪತ್ರಗಳು ನಗರದಲ್ಲಿ ಹೆದ್ದಾರಿಯುದ್ದಕ್ಕೂ ರಾರಾಜಿಸುತ್ತವೆ.

ಇದರ ಜೊತೆಗೆ, ರಸ್ತೆ ವಿಭಜಕದ ನಡುವೆ ಹಾಕಿರುವ ಗಿಡಗಳು ನಗರದ ಹೊರವಲಯದಲ್ಲಿ ಎರಡು ಬಿದ ರಸ್ತೆಯ ಬದಿಗೂ ಬೆಳೆದು ವಾಹನ ಚಾಲಕರಿಗೆ ಸಮಸ್ಯೆಯಾಗಿದ್ದರೂ ತೆಗೆಸುವ ಗೋಜಿಗೂ ಹೋಗಿಲ್ಲ.

ರಸ್ತೆ ವಿಭಜಕದಲ್ಲಿ ಹಾಕುವ ಜಾಹೀ ರಾತು, ತಿಂಗಳುಗಟ್ಟಲೆ ರಾರಾಜಿಸುವ ಫ್ಲೆಕ್ಸ್ ಜಾಹೀರಾತುಗಳು ನಗರಸಭೆಗೆ ದೊಡ್ಡಮಟ್ಟದ ಆದಾಯವನ್ನು ತಂದುಕೊಡಲಿದೆ. ಆದರೂ, ಕನಿಷ್ಠ ಹೆದ್ದಾರಿಯಲ್ಲಿಯಾದರೂ ಸೌಂದರ್ಯ ರಕ್ಷಿಸುವ, ಹೆದ್ದಾರಿಯಲ್ಲಿ ಕನಿಷ್ಠ ರಸ್ತೆ ವಿಭಜಕಗಳ ನಡುವೆ ಹಸಿರು ಬೆಳೆಸುವ ಕಾರ್ಯ ಆಗಿಲ್ಲ. ರಸ್ತೆ ಬದಿಯ ಭಿತ್ತಿಪತ್ರಗಳನ್ನು ತೆರವು ಗೊಳಿಸಿ, ಅ ಸ್ಥಳದಲ್ಲಿ ಜಿಲ್ಲೆಯ ಸಂಸ್ಕೃತಿ, ಪ್ರವಾಸಿ ತಾಣಗಳನ್ನು ಪರಿಚಯಿಸುವ ಚಿತ್ರಗಳು, ವಿವರಗಳನ್ನಾದರೂ ಹಾಕ ಬಹುದು ಎಂಬ ಸಲಹೆ ಹಿಂದೆ ಸಭೆಯಲ್ಲಿ ಬಂದಿತ್ತು. ಅದನ್ನೂ ಜಾರಿಗೊಳಿಸುವ ಯತ್ನ ನಡೆದಿಲ್ಲ.

ಇನ್ನೂ ನಗರದ ಸೌಂದರ್ಯದ ಮಟ್ಟಿಗೆ ಪಿಡುಗಾಗಿಯೇ ಪರಿಣಮಿಸಿ ರುವ ಫ್ಲೆಕ್ಸ್ ನಿಯಂತ್ರಣ ಕುರಿತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈಚೆಗೆ ದೊಡ್ಡ ಮಟ್ಟದ ಚರ್ಚೆಯೂ ಆಗಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದಕ್ಕೆ ಇನ್ನೂ ಯತೇಚ್ಛವಾಗಿ ರಾರಾಜಿಸುತ್ತಿರುವ ಫ್ಲೆಕ್ಸ್‌ಗಳೇ ಸಾಕ್ಷಿ.

ದಸರಾಕ್ಕೂ ನಗರಕ್ಕೂ ಏನು ಸಂಬಂಧ ಇಲ್ಲದಿದ್ದರೂ, ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಮತ್ತು ಮೈಸೂರು ದಸರಾಕ್ಕೆಹೆಚ್ಚಿನ ಪ್ರವಾಸಿ ಗಳು ಆಗಮಿಸುವ, ನಗರದ ಮೂಲಕವೇ ಹಾದು ಹೋಗುವ ಕಾರಣ ಹೆದ್ದಾರಿ ಯಲ್ಲಿ ಕನಿಷ್ಠ ನಿರ್ವಹಣೆಯನ್ನಾದರೂ ಮಾಡುವುದು ಅಗತ್ಯ ಎಂದು ಗಾಂಧಿನಗರದ ನಿವಾಸಿ ತುಳಸೀಧರ್ ಅಭಿಪ್ರಾಯಪಡುತ್ತಾರೆ.

ಶ್ರೀರಂಗಪಟ್ಟಣ ದಸರಾ ಸೆ. 30ಕ್ಕೆ ಆರಂಭವಾಗಲಿದೆ. ಉಳಿದ ನಾಲ್ಕೈದು ದಿನದಲ್ಲಿಯಾರೂ ಈ ಬಗೆಗೆ ಕ್ರಮ ಜರುಗಿಸಲು ಜಿಲ್ಲಾಡಳಿತ, ನಗರಸಭೆ ಮುಂದಾಗುವುದೇ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT