ADVERTISEMENT

ದೇವದಾಸಿ ಪದ್ಧತಿ ರದ್ದು ಮಾಡಿದ್ದ ಒಡೆಯರ್‌

ನಾಲ್ವಡಿ ಕೃಷ್ಣರಾಜ ಪಡೆಯರ್‌ ಜಯಂತಿ: ಸಾಹಿತಿ ಜಿ.ಟಿ.ವೀರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 11:04 IST
Last Updated 5 ಜೂನ್ 2018, 11:04 IST

ಮಂಡ್ಯ: ‘ಆದರ್ಶ ರಾಜ್ಯದ ಪರಿಕಲ್ಪನೆಯನ್ನು ಮೊದಲ ಬಾರಿಗೆ ಜಾರಿಗೆ ತಂದ ಶ್ರೇಯಸ್ಸು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಮಹಿಳಾ ಸಬಲೀಕರಣಕ್ಕಾಗಿ ದೇವದಾಸಿ ಪದ್ಧತಿ ತಡೆಗಟ್ಟಲು ಅವರು ಕಾನೂನು ರೂಪಿಸಿದ್ದರು’ ಎಂದು ನಿವೃತ್ತ ಪ್ರಾಧ್ಯಾಪಕ ಜಿ.ಟಿ.ವೀರಪ್ಪ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಪ್ರಜಾಪ್ರೇಮಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶೈಕ್ಷಣಿಕ, ಕೈಗಾರಿಕೆ, ನೀರಾವರಿ, ಸಾರಿಗೆ, ಸಾಹಿತ್ಯ ಹಾಗೂ ಕೃಷಿ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಜನರ ಶ್ರೇಯೋಭಿವೃದ್ಧಿಗಾಗಿ ಅಪಾರ ಶ್ರಮಿಸಿದ್ದರು. ಮಹಿಳೆಯರ ಬದುಕು ಹಸನು ಮಾಡುವ ದೃಷ್ಟಿಯಿಂದ ದೇವದಾಸಿ ಪದ್ಧತಿ, ಗೆಜ್ಜೆ ಪೂಜೆ ತಡೆಗಟ್ಟಲು ಕಾನೂನು ರೂಪಿಸಿ ಅನುಷ್ಠಾನಗೊಳಿಸಿದ್ದರು. ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ನೂರಾರು ಶಾಲೆ ಕಾಲೇಜುಗಳನ್ನು ಆರಂಭಿಸಿದರು’ ಎಂದು ಹೇಳಿದರು.

ADVERTISEMENT

‘ರೈತರ ಜೀವನ ಮಟ್ಟ ಸುಧಾರಣೆಗಾಗಿ ಕೃಷಿ ಇಲಾಖೆ, ಕೃಷಿ ಬ್ಯಾಂಕ್ ಹಾಗೂ ರೈತ ಸಹಕಾರಿ ಬ್ಯಾಂಕ್‍ಗಳನ್ನು ಪ್ರಾರಂಭಿಸಿ ರೈತರಿಗೆ ಸಾಲ ದೊರಕಿಸಿಕೊಡಲು ಶ್ರಮಿಸಿದರು. ಶಿವನಸಮುದ್ರದಲ್ಲಿ ಜಲ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿ ವಿದ್ಯುತ್ ಒದಗಿಸಿದ ಕನ್ನಡದ ಕಣ್ಮಣಿ ಆಗಿದ್ದಾರೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಮಾತನಾಡಿ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೊಸ ಆಡಳಿತ ನೀತಿಗಳು ದುರ್ಬಲ ವರ್ಗಗಳಿಗೆ ಶಿಕ್ಷಣ ನೀಡಿ ಆರ್ಥಿಕ ಪ್ರಗತಿ ಸಾಧಿಸುವ ದಾರಿ ತೋರಿವೆ. ಉತ್ತಮ ಆಡಳಿತ ನಿರ್ವಹಣೆ ದೃಷ್ಟಿಯಿಂದ ರೈತರು, ವರ್ತಕರು, ಗ್ರಾಮೀಣರು, ಅಲ್ಪಸಂಖ್ಯಾಂತರು, ಹಿಂದುಳಿದ ವರ್ಗದರಿಂದ ಕೂಡಿದ ಪ್ರಜಾಪ್ರತಿನಿಧಿ ಸಭೆ ರಚಿಸಿದರು’ ಎಂದು ಹೇಳಿದರು.

ಹೆಚ್ಚುವರಿ ಎಸ್‌ಪಿ ಲಾವಣ್ಯಾ, ಮಂಡ್ಯ ಎ.ಸಿ ಚಿದಾನಂದ್, ನೆಹರೂ ಯುವ ಕೇಂದ್ರದ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.