ADVERTISEMENT

ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್ ಅಧಿವೇಶನ 9ಕ್ಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 9:40 IST
Last Updated 7 ಜೂನ್ 2011, 9:40 IST

ಮೈಸೂರು: ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್‌ನ 7ನೇ ವಾರ್ಷಿಕ ಮಹಾ ಅಧಿವೇಶನವನ್ನು ಜೂ.9 ರಿಂದ 11ರ ವರೆಗೆ ನಗರದ ಜೆಕೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಯೂನಿಯನ್‌ನ ಕಾರ್ಯಾಧ್ಯಕ್ಷ ಗೋಪಾಲಕೃಷ್ಣನ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಪ್ರಥಮ ಬಾರಿಗೆ ಈ ಅಧಿವೇಶನವನ್ನು ಆಯೋಜಿಸಲಾಗಿದೆ.
 
ಜೂ.9 ರಂದು ಬೆಳಿಗ್ಗೆ 10.30ಕ್ಕೆ ಸಂಘದ ಕಚೇರಿ ಆವರಣದಲ್ಲಿ ಅಖಿಲ ಭಾರತ ರೈಲ್ವೆ ಕಾರ್ಮಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನೈರುತ್ಯ ರೈಲ್ವೆ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಕುಲದೀಪ್ ಚತುರ್ವೇದಿ, ಎಂ.ಎಂ.ಡಿಕ್ರೊಸ್ ಉಪಸ್ಥಿತರಿರುವರು. ಬೆಳಿಗ್ಗೆ 11.30ಕ್ಕೆ ಮಹಿಳಾ ಅಧಿವೇಶನ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅಶೋಕಪುರಂ ರೈಲ್ವೆ ವರ್ಕ್‌ಶಾಪ್‌ನಿಂದ ಬೈಕ್ ರ‌್ಯಾಲಿ ಆರಂಭವಾಗಲಿದೆ~ ಎಂದರು.

ಖಾಸಗೀಕರಣ ವಿರೋಧಿಸಿ ಹಾಗೂ ರೈಲ್ವೆ ಉದ್ಯೋಗದಲ್ಲಿ ಸ್ಥಳೀಯರಿಗೆ ಪ್ರಾಮುಖ್ಯತೆ ನೀಡುವಂತೆ ಆಗ್ರಹಿಸಿ ಮಧ್ಯಾಹ್ನ 3.30ಕ್ಕೆ ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾವು ಜೆಎಲ್‌ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ದಿವಾನ್ಸ್ ರಸ್ತೆ, ಸಯ್ಯಾಜಿರಾವ್ ರಸ್ತೆ ಮೂಲಕ ಜೆಕೆ ಮೈದಾನ ತಲುಪಲಿದೆ. ಸಂಜೆ 5.30ರಿಂದ ಸಭಾ ಕಾರ್ಯಕ್ರಮಗಳು ಆರಂಭವಾಗಲಿವೆ. ಉಳಿದ ಎರಡು ದಿನ ಚರ್ಚೆ, ಸಂವಾದಗಳು ಜರುಗಲಿವೆ ಎಂದು ತಿಳಿಸಿದರು.

ಸಂಘದ ವಿಭಾಗೀಯ ಅಧ್ಯಕ್ಷ ಎಸ್.ಸೋಮಶೇಖರ್, ಎಂ.ರಾಜಕುಮಾರ್, ವಿ.ಶಂಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.