ADVERTISEMENT

ನೊಂದ ಮಕ್ಕಳ ಪಾಲಿಗೆ ಆಸರೆಯ ಕರೆ!

ಉ.ಮ.ಮಹೇಶ್
Published 15 ಜನವರಿ 2012, 9:25 IST
Last Updated 15 ಜನವರಿ 2012, 9:25 IST

ಮಂಡ್ಯ: ಯಾವುದೋ ಕಾರಣಕ್ಕೆ ಹೆತ್ತಮ್ಮ ಕರುಳ ಕುಡಿಯನ್ನು ಹಾಗೇ ಬಿಟ್ಟು ಹೊರಟುಬಿಡುತ್ತಾಳೆ. ಅಪ್ಪ- ಅಮ್ಮನ ನಿತ್ಯದ ಜಗಳದ ನಡುವೆ ಮಾನಸಿಕ ತೊಳಲಾಟದಿಂದ ಬಳಲುವ ಮಗು ಮನೆಯಿಂದ ಹೊರನಡೆಯಬಹುದು. ಅನೇಕ ಮಕ್ಕಳಿಗೆ ಬಾಲ್ಯದ ಸವಿ ದಿನಗಳು ಇರುವುದಿಲ್ಲ, ಅವರು ಬಾಲ ಕಾರ್ಮಿಕರು. ಪೋಷಕ ರಿಂದ ತಪ್ಪಿಸಿಕೊಂಡ ಮಕ್ಕಳು ಎಲ್ಲಿಯೋ ನಿಂತು ಅಳುತ್ತವೆ. ಅಪ್ಪ- ಅಮ್ಮನ ಭಾವ ಪ್ರಪಂಚದಿಂದ ಹೊರಬಂದ ಸ್ಥಿತಿ ಆ ಮಕ್ಕಳದು. ಶಾಲೆಗೆ ಹೋಗದ ಮಕ್ಕಳದು ಇನ್ನೊಂದು ಸ್ಥಿತಿ.

ಈ ಎಲ್ಲವೂ ಕಷ್ಟದಲ್ಲಿರುವ ಮಕ್ಕಳ ಪಡಿಪಾಟಲು ಗಳು. ಒಬ್ಬೊಬ್ಬ ಮಗುವಿನದೂ ಒಂದೊಂದು ಕಥೆ. ಎಲ್ಲ ಮಕ್ಕಳಿಗೂ ಒಂದಲ್ಲ ಒಂದು ಸಮಸ್ಯೆ. ಇಂಥ ಮಕ್ಕಳ ರಕ್ಷಣೆಗೆ ಧಾವಿಸಿ, ಅವರಿಗೆ ಆರೈಕೆ ಮಾಡಿ, ಸಮಾಧಾನಕರ ವಾತಾವರಣ ನಿರ್ಮಿಸಿ, ಜತೆಗೇ ಆ ಮಕ್ಕಳನ್ನು ಮತ್ತೆ ಪೋಷಕರ ಮಡಿಲಿಗೆ ಅಥವಾ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗದ ಬಗ್ಗೆ ಕ್ರಮ ವಹಿಸಲು ಇರುವ ವೇದಿಕೆಯೇ `ಮಕ್ಕಳ ಸಹಾಯವಾಣಿ~. ಶುಲ್ಕ ರಹಿತ ದೂರವಾಣಿ ಕರೆ ಸಂಖ್ಯೆ 1098.

ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ದೂರವಾಣಿ ಸಂಖ್ಯೆಗೆ ಮಾಸಿಕ ಸುಮಾರು 25 ರಿಂದ 30 ಕರೆಗಳು ಬರುತ್ತವೆ. ಈ ಸಂಖ್ಯೆಗೆ ಜನರು ಮಾಡುವ ಪ್ರತಿ ಕರೆಯೂ ಯಾವುದೋ ಮಗುವಿನ ರಕ್ಷಣೆಗೆ ನೆರವಾಗಲಿದೆ. ಅನಾಥ ಮಕ್ಕಳ ನೆಮ್ಮದಿಯ ಬದುಕಿಗೆ ನೆರವಾಗಲಿದೆ.

ಮಂಡ್ಯದಲ್ಲಿ ಬಂದೀಗೌಡ ಬಡಾವಣೆಯ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮತ್ತು ಗಾಂಧಿನಗರದ ಭೀಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಬರ್ಡ್ಸ್) ಜಂಟಿಯಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯ ನಿರ್ವಹಣೆ ಮಾಡುತ್ತಿದೆ.

ದಿನದ 24 ಗಂಟೆ ಯಾವುದೇ ಅವಧಿಯಲ್ಲಿ ಉಚಿತವಾಗಿ ದೂರವಾಣಿ ಕರೆ ಮಾಡುವ ಮೂಲಕ ಯಾವುದೇ ನಾಗರಿಕರು ಸಂಕಷ್ಟದಲ್ಲಿ ಇರುವ ಮಗುವಿನ ರಕ್ಷಣೆಗೆ ಧಾವಿಸಬಹುದು. ಹಿಂಸೆಗೆ ಗುರಿಯಾಗುವ ಮಕ್ಕಳು, ಬೀದಿಯಲ್ಲಿ ಅಲೆದಾಡುವ ಮಕ್ಕಳು, ಮಾನಸಿಕ- ಶಾರೀರಿಕ, ಅಂಗವಿಕಲ ಮಕ್ಕಳು, ಬಾಲ ಕಾರ್ಮಿಕರು, ಮಾದಕ ವ್ಯಸನಕ್ಕೆ ತುತ್ತಾದ ಮಕ್ಕಳು, ಕಾಣೆಯಾದ ಮಕ್ಕಳು ಹೀಗೆ ವಿವಿಧ ಸಮಸ್ಯೆಗಳಡಿ ಸಿಲುಕಿದ ಮಕ್ಕಳ ನೆರವಿಗೆ ಈ ಮೂಲಕ ಧಾವಿಸಬಹುದು.

`ಹೀಗೆ ಕರೆ ಬಂದ ಒಂದು ಗಂಟೆಯೊಳಗೆ ನಮ್ಮ ಸ್ವಯಂ ಸೇವಕರು ಮಗುವಿನ ರಕ್ಷಣೆ ಧಾವಿಸಲಿದ್ದಾರೆ. ಮಗುವಿನ ರಕ್ಷಣೆ, ಮಗು ಸಮಾಧಾನ ಆಗುವಂತೆ ವಾತಾವರಣ ನಿರ್ಮಾಣ, ಮಗುವಿನ ಪೋಷಕರ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ, ಹೀಗೆ ಮಗುವಿನ ಆಶ್ರಯ ಒದಗಿಸುವ ಕಾರ್ಯ ನಡೆಯಲಿದೆ~ ಎನ್ನುತ್ತಾರೆ ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರಗುರು ಅವರು.

ಅಲ್ಲದೆ, ಮಗುವಿಗೆ ಅನಾರೋಗ್ಯ ಸ್ಥಿತಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ನೆರವು ಪಡೆದು ವೈದ್ಯಕೀಯ ಚಿಕಿತ್ಸೆ; ದಾನಿಗಳ ನೆರವು ಪಡೆದು ವಿದ್ಯಾಭ್ಯಾಸ ಒದಗಿಸುವ ಕಾರ್ಯವು ನಡೆಯಲಿದೆ ಎಂದರು.

ಕಷ್ಟದಲ್ಲಿರುವ ಮಕ್ಕಳ ರಕ್ಷಣೆಗೆ ಧಾವಿಸಬೇಕಾ ದುದು ಎಲ್ಲರ ಹೊಣೆ. ಮಕ್ಕಳ ಸಹಾಯವಾಣಿ ಕೂಡಾ ಹೀಗೆ ಸಮುದಾಯದ ಸಹಕಾರದಿಂದಲೇ ನಡೆಯುತ್ತಿದೆ. ಪೊಲೀಸರು, ಸ್ವಯಂ ಸೇವಕರು, ಸಾರ್ವಜನಿಕರೂ ಹೀಗೆ ಎಲ್ಲರು ಕರೆ ನೀಡಿ ಮಾಹಿತಿ ಕೊಡುತ್ತಾರೆ. ಅಂಥ ಸಂದರ್ಭ ಸಂಸ್ಥೆಯ ಸ್ವಯಂ ಸೇವಕರು ಧಾವಿಸಿಮಕ್ಕಳ ರಕ್ಷಣೆ ಕ್ರಮ ಕೈಗೊಳ್ಳುತ್ತಾರೆ ಎಂಬುದು ಬರ್ಡ್ಸ್ ಸಂಸ್ಥೆಯ ನಿರ್ದೇಶಕ ವೆಂಕಟೇಶ್ ಅವರ ವಿವರಣೆ.

ಒಟ್ಟಾರೆ ಸ್ಥಿರದೂರವಾಣಿಯಿಂದಲೇ ಕರೆ ಮಾಡ ಬೇಕು, ಮೊಬೈಲ್‌ನಿಂದ ಕರೆ ಮಾಡಲು ಆಗುವುದಿಲ್ಲ ಎಂಬ ಕೊರತೆಯನ್ನು ಹೊರತುಪಡಿಸಿದರೆ ಮಕ್ಕಳ ಸಹಾಯವಾಣಿ 1098 ನೊಂದ ಮಕ್ಕಳ ಪಾಲಿಗೆ ಆಸರೆಯ, ಭರವಸೆಯ ಕರೆ ಎಂಬುದಂತೂ ನಿಜ.

ಹೆಚ್ಚಿನ ಮಾಹಿತಿಗೆ ದೂರವಾಣಿ 08232-221717 (ವಿಕಸನ ಸಂಸ್ಥೆ) ಮತ್ತು 08232-239600 (ಬರ್ಡ್ಸ್) ಸಂಖ್ಯೆಗಳನ್ನು ಸಂಪರ್ಕಿಸಬಹುದು.

ದತ್ತು ಪಡೆವುದು ಸುಲಭ ಅಲ್ಲ!
ಪೋಷಕರು ಬಿಟ್ಟುಹೋದ ಶಿಶುವನ್ನೋ, ಅನಾಥ ಮಕ್ಕಳನ್ನೋ ದತ್ತು ಪಡೆಯುವ ಕಾರ್ಯ ಅನಧಿಕೃತವಾಗಿ ಒಳಗೊಳಗೇ ನಡೆಯುತ್ತಿದೆ. ಆದರೆ, ಹೀಗೆ ದತ್ತು ಪಡೆಯುವುದು ಕಾನೂನು ಬಾಹಿರ ಎನ್ನುತ್ತಾರೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರೂ ಆದ ಬರ್ಡ್ಸ್ ಸಂಸ್ಥೆಯ ವೆಂಕಟೇಶ್.

ಪೋಷಕರು ಇಲ್ಲದ ಮಕ್ಕಳ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲೆಯ ವಿಕಸನ, ಜನಪದ ಸೇವಾ ಟ್ರಸ್ಟ್ ಸಂಸ್ಥೆಗಳು ಬಾಲಮಂದಿರಕ್ಕೆ ಒಪ್ಪಿಸುತ್ತವೆ. ಇದು, ಮಕ್ಕಳ ಕಲ್ಯಾಣ ಸಮಿತಿಯ ವ್ಯಾಪ್ತಿಗೆ ಬರುತ್ತದೆ. ಸಮಿತಿ ವಿಚಾರಣೆ ನಡೆಸಿ ಇಂಥ  ಮಗುವನ್ನು ದತ್ತು ನೀಡಬಹುದು ಎಂದು ಘೋಷಿಸಿದ ಬಳಿಕವಷ್ಟೇ ದತ್ತು ನೀಡುವ ಪ್ರಕ್ರಿಯೆ ನಡೆಯಲಿದೆ.

ಆ ಬಳಿಕ ವಿಕಸನ ಸಂಸ್ಥೆ  ತಮ್ಮಲ್ಲಿ ನೋಂದಾಯಿಸಿರುವ ದತ್ತು ಪಡೆಯಲು ಬಯಸುವ ಪೋಷಕರನ್ನು ಸಂಪರ್ಕಿಸಲಿದೆ. ದತ್ತು ನೀಡುವ ಮುನ್ನ ಮಗು- ದತ್ತು ಪಡೆಯುವವರು ಪರಸ್ಪರ ಹೊಂದಿಕೆ ಆಗುತ್ತಾರೆಯೋ ಎಂಬುದನ್ನು ಪರಿಶೀಲಿಸಲು ಆರು ತಿಂಗಳು ಕುಟುಂಬದೊಂದಿಗೆ ಬಿಡಲಾಗುತ್ತದೆ. ಹೊಂದಿಕೆ ಆಗುತ್ತದೆ ಎಂಬುದು ಖಾತರಿಯಾದ ಬಳಿಕ ಅಧಿಕೃತವಾಗಿ ದತ್ತು ನೀಡಲಾಗುತ್ತದೆ ಎಂದು ವೆಂಕಟೇಶ್ ವಿವರಿಸಿದರು.

ವಿಕಸನ ಸಂಸ್ಥೆಯಲ್ಲಿ ಪ್ರಸ್ತುತ 11 ಕುಟುಂಬಗಳು ಮಗು ದತ್ತು ಪಡೆಯಲು ಹೆಸರು ನೋಂದಾಯಿ ಸಿದ್ದರೆ, ಪೋಷಕರಿಂದ ದೂರವಾದ ಒಟ್ಟು ಒಂದೂ ವರೆ ದಿನದಿಂದ 3 ತಿಂಗಳವರೆಗಿನ 7 ನವಜಾತ ಶಿಶುಗಳು ವಿಕಸನ ಮತ್ತು ಜನಪದ ಸೇವಾ ಟ್ರಸ್ಟ್‌ನ ಸುಪರ್ದಿಯಲ್ಲಿವೆ ಎಂಬುದು ಮಹೇಶ್ ಚಂದ್ರಗುರು ಅವರ ವಿವರಣೆ.

ಬಾಲಕಿ ಮಾರಾಟ ತಪ್ಪಿಸಿದ ಕರೆ
ಮಕ್ಕಳ ಸಹಾಯವಾಣಿಗೆ ಹೀಗೆ ಬಂದ ಕರೆಯೊಂದು ದೌರ್ಜನ್ಯದಿಂದ ನೊಂದು ರಕ್ಷಣೆಗಾಗಿ ಇನ್ನೊಬ್ಬರನ್ನು ಆಶ್ರಯಿಸಿದ್ದ ಬಾಲಕಿಯ ಮಾರಾಟ ಯತ್ನವನ್ನು ವಿಫಲಗೊಳಿಸಿರುವ ನಿದರ್ಶನವು ಇದೆ.

ಆ ಬಾಲಕಿ ಮೂಲತಃ ಸಕಲೇಶಪುರದವರು. ತಂದೆ-ತಾಯಿ ಇಲ್ಲ. ಸಂಬಂಧಿಕರ ದೌರ್ಜನ್ಯ ಸಹಿಸದೇ ಯಾವುದೋ ಬಸ್ ಹತ್ತಿ ಧರ್ಮಸ್ಥಳ ತಲುಪಿಕೊಂಡಿದ್ದಳು. ಹೀಗೆ ಧರ್ಮಸ್ಥಳಕ್ಕೆ ಹೋಗಿದ್ದ ಜಿಲ್ಲೆಯ ಕೆ.ಆರ್. ಪೇಟೆಯ ತಾಲ್ಲೂಕಿನ ಮಹಿಳೆಯೊಬ್ಬರಿಗೆ ಸಿಕ್ಕಿಬಿದ್ದಿದ್ದಳು.

ರಕ್ಷಣೆಯ ಭರವಸೆ ನೀಡಿ ಕರೆ ತಂದಿದ್ದ ತನ್ನನ್ನು ಬಳಿಕ ಮಾರಾಟ ಮಾಡುವ ಯತ್ನ ನಡೆದಿದೆ ಎಂಬುದು ದೂರವಾಣಿ ಸಂಭಾಷಣೆ ಆಲಿಸಿದ ಬಾಲಕಿಗೆ ತಿಳಿದುಬಂದಿತ್ತು. ಬಾಲಕಿ ಅಲ್ಲಿಂದಲೂ ತಪ್ಪಿಸಿಕೊಂಡು ಹೊರಟು, ಇನ್ನೊಂದು ಕುಟುಂಬ ಸೇರಿದಳು. ಈ ಬೆಳವಣಿಗೆ ಗಮನಿಸಿದ ಸಾರ್ವಜನಿಕರೊಬ್ಬರು ಸಹಾಯವಾಣಿಗೆ ಕರೆ ಮಾಡಿದರು. ಕರೆ ಬಾಲಕಿಯನ್ನು ರಕ್ಷಿಸಿದ್ದಷ್ಟೇ ಅಲ್ಲ, ಮಾರಾಟ ಮಾಡಲು ಯತ್ನಿಸಿದ್ದವರನ್ನು ಜೈಲಿಗೂ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT