ADVERTISEMENT

`ಪಕ್ಷಪಾತದಲ್ಲಿ ಮುಳುಗಿದ ಪುರಸಭೆ'

ತಾ.ಪಂ. ಕೆಡಿಪಿ ಸಭೆಯಲ್ಲಿ ಶಾಸಕ ನಾರಾಯಣಗೌಡ ಗರಂ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 6:06 IST
Last Updated 3 ಸೆಪ್ಟೆಂಬರ್ 2013, 6:06 IST

ಕೃಷ್ಣರಾಜಪೇಟೆ: `ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ಸ್ಥಳೀಯ ಪುರಸಭೆ ನಿರ್ವಹಿಸಿದ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಬೇಕಾದ ಅಗತ್ಯವಿದೆ' ಎಂದು ಶಾಸಕ ಕೆ.ಸಿ. ನಾರಾಯಣಗೌಡ ಪುರಸಭೆಯ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಪುರಸಭೆ ಅಧಿಕಾರಿಗಳಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದ ಅವರು ಪಟ್ಟಣದ ನಿವೇಶನರಹಿತರಿಗೆ ಸೂರನ್ನೊದಗಿಸಲು ಕೂಡಲೇ ಅಗತ್ಯ ಕ್ರಮ ವಹಿಸಬೇಕು' ಎಂದು ಸೂಚನೆ ನೀಡಿದರು. ಪಟ್ಟಣದ ಅಭಿವೃದ್ಧಿಯ ಕಡೆಗೆ ಚಿಂತನೆ ನಡೆಸದೆ, ಸಾರ್ವಜನಿಕರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸದೆ, ಕಳಪೆ ಕಾಮಗಾರಿ ನಡೆಸುತ್ತಿರುವ ಪುರಸಭೆ ಕಾರ್ಯ ಖಂಡನೀಯ' ಎಂದರು.

`ಅಧಿಕಾರಿಗಳು ಜನಸಾಮಾನ್ಯರ ಕೆಲಸಗಳನ್ನು ಮುತುವರ್ಜಿಯಿಂದ ಮಾಡಬೇಕು. ಅನಗತ್ಯವಾಗಿ ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಪರಿಪಾಠ ತಪ್ಪಬೇಕು. ಉತ್ತಮ ಸೇವೆ ನೀಡುವ ಮೂಲಕ ತಾಲ್ಲೂಕಿಗೆ ಒಳ್ಳೆಯ ಹೆಸರು ಬರುವಂತೆ ಮಾಡಬೇಕು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಗ್ರಾಮಸಭೆಗಳಲ್ಲಿ  ಪಾರದರ್ಶಕವಾಗಿ ಆಯ್ಕೆಮಾಡಬೇಕು' ಎಂದು ತಾಕೀತು ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಉಪಾಧ್ಯಕ್ಷೆ ಭುವನೇಶ್ವರಿ ಮೋಹನ್, ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಕೆ.ಕುಮಾರ್, ತಹಶೀಲ್ದಾರ್ ಬಿ. ಅಹೋಬಲಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೈ.ಎನ್. ಚಂದ್ರಮೌಳಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.