ಮದ್ದೂರು: ವಿಶ್ವ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡುವುದಾಗಿ ರಾಜ್ಯಪಾಲ ಎಚ್. ಆರ್.ಭಾರಧ್ವಾಜ್ ಮಂಗಳವಾರ ಸಂಜೆ ಭರವಸೆ ನೀಡಿದರು. ಕೊಕ್ಕರೆ ಬೆಳ್ಳೂರಿಗೆ ಸಂಜೆ 5ಗಂಟೆ ವೇಳೆಗೆ ಪತ್ನಿ ಪುಪುಲ್ಲತಾ ಅವರೊಂದಿಗೆ ಭೇಟಿ ನೀಡಿದ ಅವರು, ಅಲ್ಲಿನ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಯ ಅಭಿವೃದ್ಧಿ ಕಾರ್ಯ ಪರಿಶೀಲಿಸಿ ಸುದ್ದಿಗಾರರೊಡನೆ ಮಾತನಾಡಿದರು.
ಜನರ ಹಾಗೂ ಪಕ್ಷಿಗಳ ನಡುವಿನ ಅವಿನಾಭಾವ ಸಂಬಂಧಕ್ಕೆ ಕೊಕ್ಕರೆ ಬೆಳ್ಳೂರು ಜೀವಂತ ಉದಾಹರಣೆ. ಈ ಸಂಬಂಧಕ್ಕೆ ಯಾವುದೇ ಭಂಗ ಬಾರದಂತೆ ಎಚ್ಚರ ವಹಿಸುವುದು ಅತೀ ಮುಖ್ಯ ಸಂಗತಿ ಎಂದರು.
ಚಕ್ಕಡಿ ಏರಿದ ರಾಜ್ಯಪಾಲರು: ಪತ್ನಿಯೊಂದಿಗೆ ಎತ್ತಿನ ಗಾಡಿಯನ್ನೆರಿದ ರಾಜ್ಯಪಾಲರು, ಇಡೀ ಗ್ರಾಮವನ್ನು ಒಂದು ಸುತ್ತು ಹಾಕಿದರು. ಗ್ರಾಮದ ಬೀದಿ ಬೀದಿಗಳಲ್ಲಿ ಜನಸಂದಣಿ ನಡುವೆ ಮರಗಳ ಮೇಲೆ ಹಿಂಡು ಹಿಂಡಾಗಿ ಕುಳಿತ ಹೆಜ್ಜಾರ್ಲೆ (ಪೆಲಿಕಾನ್) ಹಾಗೂ ಬಣ್ಣದ ಕೊಕ್ಕರೆ(ಪೈಂಟೆಡ್ ಸ್ಟಾರ್ಕ್)ಗಳ ಹಿಂಡನ್ನು ಕಂಡು ಅಚ್ಚರಿಗೊಂಡರು. ಜನರು ಹಾಗೂ ಹಕ್ಕಿಗಳ ನಡುವಿನ ಬಾಂಧವ್ಯ ಅವಿನಭಾವ ಸಂಬಂಧದ ಬಗೆಗೆ ಡಿಸಿಎಫ್ ಯತೀಶ್‌ಕುಮಾರ್ ಅವರಿಂದ ವಿವರಣೆ ಪಡೆದರು.
ನಂತರ ಅಲ್ಲಿಂದ ಪ್ರವಾಸೋದ್ಯಮ ಇಲಾಖೆ 73.17ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಪಕ್ಷಿ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ದಿನನಿತ್ಯದ ಚಟುವಟಿಕೆಗಳ ವಿವರಗಳನ್ನು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್.ನಾಗರಾಜರಿಂದ ಪಡೆದರು. ಇದಲ್ಲದೇ ಅರಣ್ಯ ಇಲಾಖೆ ಹೊಸದಾಗಿ ನೆಟ್ಟ ಗಿಡಗಳ ವಿಚಾರಣೆ ನಡೆಸಿದ ಅವರು, ಸ್ಥಳೀಯ ಹೆಜ್ಜಾರ್ಲೆ ಬಳಗದ ಕಾರ್ಯಚಟುವಟಿಕೆಗಳ ಬಗೆಗೆ ಮಾಹಿತಿ ಪಡೆದರು.
ಎತ್ತಿನ ಗಾಡಿ ಸವಾರಿ ಬಗೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದವನು. ನಾನು ಬೇಸಾಯದ ಕೆಲಸವನ್ನು ಮಾಡಿದ್ದೇನೆ. ಎತ್ತಿನ ಗಾಡಿ ಸವಾರಿ ನನಗೆ ಹೊಸತಲ್ಲ ಎಂದು ಹೇಳಿದ ಅವರು, ಹಳ್ಳಿಗಾಡಿನ ಬದುಕು ಹಾಗೂ ಜನರ ಪ್ರೀತಿ ನನ್ನನ್ನು ಭಾವುಕನನ್ನಾಗಿಸಿದೆ ಎಂದರು.
ಮಾರ್ಗ ಮಧ್ಯದಲ್ಲಿ ತೈಲೂರು ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ರಾಜ್ಯಪಾಲರು, ಗ್ರಾಮಸ್ಥರಿಂದ ಪಕ್ಷಿಗಳ ಅಹಾರಕ್ಕೆ ಆಧಾರವಾಗಿರುವ ತೈಲೂರು ಕೆರೆ ಅಭಿವೃದ್ಧಿ ಹಾಗೂ ಒತ್ತುವರಿ ತೆರವುಗೊಳಿಸುವ ಬಗೆಗೆ ಸಾಹಿತಿ ತೈಲೂರು ವೆಂಕಟಕೃಷ್ಣ, ರಘು, ನಾಗೇಶ್, ಬೊಮ್ಮಯ್ಯ ಹಾಗೂ ಸ್ವಾಮಿ ಅವರಿಂದ ಮನವಿ ಸ್ವೀಕರಿಸಿದರು.
ಶಾಸಕಿ ಕಲ್ಪನ ಸಿದ್ದರಾಜು, ತಾ.ಪಂ ಅಧ್ಯಕ್ಷೆ ಚೌಡಮ್ಮ, ಗ್ರಾಪಂ ಅಧ್ಯಕ್ಷ ಬಸವರಾಜೇ ಅರಸು, ಉಪಾಧ್ಯಕ್ಷೆ ಶಶಿರೇಖಾ, ಜಿಲ್ಲಾಧಿಕಾರಿ ಪಿ.ಸಿ.ಜಾಫರ್, ಎಸ್ಪಿ ಕೌಶಲೇಂದ್ರಕುಮಾರ್, ಜಿಪಂ ಸಿಇಓ ಜಯರಾಂ, ಶ್ರೀಧರಮೂರ್ತಿ, ತಹಶೀಲ್ದಾರ್ ಚಂದ್ರಶೇಖರಯ್ಯ, ಹೆಜ್ಜಾರ್ಲೆ ಬಳಗದ ಮಹದೇವಸ್ವಾಮಿ, ಶಿವು, ಜಯರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.