ADVERTISEMENT

ಪಿಯು ಪರೀಕ್ಷೆಗೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 9:40 IST
Last Updated 12 ಮಾರ್ಚ್ 2011, 9:40 IST

ಮಂಡ್ಯ: ಪ್ರಸ್ತಕ ಶೈಕ್ಷಣಿಕ ವರ್ಷದ ದ್ವಿತೀಯ  ಪಿಯುಸಿ ಪರೀಕ್ಷೆಯು  ಇದೇ 17ರಿಂದ 30 ರವರೆಗೂ ನಡೆಯಲಿದ್ದು,  ಜಿಲ್ಲೆಯಲ್ಲಿ ಒಟ್ಟು 17,195 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಈ ಪೈಕಿ  8,946 ಮಂದಿ ಬಾಲಕಿಯರು. ಪರೀಕ್ಷಾ ನಕಲು, ಅವ್ಯವಹಾರ ತಡೆದು ತಾಲ್ಲೂಕು ಹಂತದಲ್ಲಿಯೂ ಜಾಗೃತ ದಳಗಳನ್ನು ರಚನೆ ಮಾಡಿ ್ದದರೂ, ಸೂಕ್ಷ್ಮ ಕೇಂದ್ರಗಳು ಸೇರಿದಂತೆ ಪರೀಕ್ಷಾ ವ್ಯವಸ್ಥೆಯ ವೀಡಿಯೋ ಚಿತ್ರೀಕರಣ ಮಾಡುವು ದನ್ನು ಕೈಬಿಡಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಬಿ.ಎಂ.ಮಹದೇವ ಮೂರ್ತಿ ಅವರ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 25 ಪರೀಕ್ಷಾ ಕೇಂದ್ರಗಳಿದ್ದು, ಪರೀಕ್ಷೆಗೆ ಹಾಜರಾಗುತ್ತಿರುವ 17,195 ವಿದ್ಯಾರ್ಥಿಗಳ ಪೈಕಿ 13,239 ಮಂದಿ ಹೊಸದಾಗಿ ಪರೀಕ್ಷೆ ಎದುರಿಸುತ್ತಿದ್ದಾರೆ ಎಂದರು. ಅಲ್ಲದೆ, ಮೊಬೈಲ್ ಜಾಗೃತ ದಳಗಳು ಕಾರ್ಯ ನಿರ್ವಹಿಸಲಿದ್ದು,  ಮಂಡ್ಯದ ಮಾಂಡವ್ಯ ಪದವಿಪೂರ್ವ ಕಾಲೇಜು, ಕೆ.ಆರ್.ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ನಾಗ ಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜು, ಮದ್ದೂರು ತಾಲ್ಲೂಕು ಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜು ಸೂಕ್ಷ್ಮ ಕೇಂದ್ರಗಳಾಗಿವೆ.

ದ್ವಿತೀಯ ಪಿಯುಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸ ಲಿದ್ದು, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಪ್ರಶ್ನೆಪತ್ರಿಕೆ ಸಂರಕ್ಷಣೆ, ವಿತರಣೆ ಹೊಣೆಯನ್ನು ಬಿಇಒ ನೇತೃತ್ವದ ಜಾಗೃತ ದಳಕ್ಕೆ ವಹಿಸಿದ್ದು, ಪ್ರತಿ ತಾಲ್ಲೂಕಿನಲ್ಲಿಯೂ ಇಂಥ ಒಂದು ತಂಡ ರಚನೆಯಾಗಲಿದೆ. ಪೊಲೀಸ್ ರಕ್ಷಣೆಯಲ್ಲಿ ಪರೀಕ್ಷೆ ಆರಂಭಕ್ಕೂ ಅರ್ಧ ಗಂಟೆ ಮುನ್ನ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಮಿತಿಗಳು ರಚನೆಯಾಗಿದ್ದು, ಆಯಾ ತಾಲ್ಲೂಕು ಪಂಚಾಯಿತಿ ಇಒಗಳು ವೀಕ್ಷಕರಾಗಿ ಕಾರ್ಯ ನಿರ್ವಹಿಸು ವರು. ಅಲ್ಲದೆ, ಪ್ರತಿ ತಾಲ್ಲೂಕಿನಲ್ಲಿಯ ಪ್ರಾಚಾರ್ಯರ ನೇತೃತ್ವದಲ್ಲಿ ನಾಲ್ಕು ಜಾಗೃತ ದಳಗಳು ಕಾರ್ಯ ನಿರ್ವ ಹಿಸಲಿವೆ. ಮೊದಲ ದಿನ ಮಾ. 17ರಂದು ರಸಾಯನ ವಿಜ್ಞಾನ ಮತ್ತು ವ್ಯಾವಹಾರಿಕ ಅಧ್ಯಯನ ವಿಷಯದ ಪರೀಕ್ಷೆ ನಡೆದರೆ, 18ರಂದು ಕನ್ನಡ ಸೇರಿದಂತೆ ಭಾಷಾ ವಿಷಯದ ಪರೀಕ್ಷೆಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.