ADVERTISEMENT

ಪೊಲೀಸರ ಕ್ರಮ ಖಂಡಿಸಿ ರೈಲು ತಡೆ

ಟಿಕೆಟ್ ಪಡೆಯದ ರೈತನ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 5:40 IST
Last Updated 22 ಡಿಸೆಂಬರ್ 2012, 5:40 IST

ಮದ್ದೂರು:  ಬೆಂಗಳೂರಿನಲ್ಲಿ ಶುಕ್ರವಾರ ವಿದ್ಯುತ್ ವೈಫಲ್ಯ ಖಂಡಿಸಿ ಏರ್ಪಡಿಸಿದ್ದ ಕಾವೇರಿ ಭವನ ಮುತ್ತಿಗೆ ಚಳವಳಿಯಲ್ಲಿ ಪಾಲ್ಗೊಂಡ ರೈತನೊಬ್ಬ ಟಿಕೆಟ್ ರಹಿತವಾಗಿ ಹಿಂದಿರುಗುತ್ತಿದ್ದ ವೇಳೆ ಆತನನ್ನು ಮೈಸೂರು ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ ಕ್ರಮ ಖಂಡಿಸಿ ಮದ್ದೂರು ಸಮೀಪದ ಶಿವಪುರ ರೈಲು ನಿಲ್ದಾಣದ ಬಳಿ  ರೈತಸಂಘದ ಕಾರ್ಯಕರ್ತರು ರೈಲು ತಡೆ ಚಳವಳಿ ನಡೆಸಿದರು.

ಸಂಜೆ 6ಗಂಟೆಗೆ ರೈಲು ನಿಲ್ದಾಣಕ್ಕೆ ಆಗಮಿಸಿದ ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲನ್ನು ಅಡ್ಡಗಟ್ಟಿದ ರೈತ ಕಾರ್ಯಕರ್ತರು ರೈಲ್ವೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. 40ನಿಮಿಷಕ್ಕೂ ಹೆಚ್ಚು ಕಾಲ ರೈಲು ತಡೆ ನಡೆಸಿದ್ದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಪರದಾಡಿದರು. ಅಷ್ಟರಲ್ಲಿ ಮೈಸೂರಿನಲ್ಲಿ ರೈತ ಕಾರ್ಯಕರ್ತನನ್ನು ಬಿಡುಗಡೆ ಮಾಡಿದ ಸುದ್ದಿಯನ್ನು ಮೊಬೈಲ್ ದೂರವಾಣಿ ಮೂಲಕ ಖಚಿತಪಡಿಸಿಕೊಂಡ ರೈತ ಕಾರ್ಯಕರ್ತರು ತಮ್ಮ ಪ್ರತಿಭಟನೆ ಹಿಂಪಡೆದು ಅಲ್ಲಿಂದ ತೆರಳಿದರು.

ರೈತಸಂಘದ ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಸೀತರಾಮು, ಕೆ.ಎಲ್.ಕೃಷ್ಣ, ಮರಿಲಿಂಗಯ್ಯ, ನಿಂಗಪ್ಪ, ರಾಮಲಿಂಗಯ್ಯ, ಸೊಳ್ಳೆಪುರ ಶಿವರಾಮು, ಪ್ರಸನ್ನ, ಶ್ರೀಕಂಠ ಸೇರಿದಂತೆ ಹಲವರು ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.