ADVERTISEMENT

ಪೌರಾಣಿಕ ಪಾತ್ರಕ್ಕೆ ಜೀವ ತುಂಬವ ನಟ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 6:20 IST
Last Updated 26 ಫೆಬ್ರುವರಿ 2012, 6:20 IST
ಪೌರಾಣಿಕ ಪಾತ್ರಕ್ಕೆ ಜೀವ ತುಂಬವ ನಟ
ಪೌರಾಣಿಕ ಪಾತ್ರಕ್ಕೆ ಜೀವ ತುಂಬವ ನಟ   

ಮದ್ದೂರು: ಕಂಚಿನ ಕಂಠ, ಉತ್ತಮ ಭಾವಾಭಿನಯ. ಅಭಿನಯಿಸುವ ಪಾತ್ರ ದಲ್ಲಿ ಪರಕಾಯ ಪ್ರವೇಶ ಮಾಡುವ ಚಾತುರ್ಯ. ಇದು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ರಂಗಕಲಾವಿದ ಪುಟ್ಟಸ್ವಾಮಿ ಅವರ ರಂಗ ಕಲೆಯ ಸಂಕ್ಷಿಪ್ತ ನೋಟ. 

ಪೌರಾಣಿಕ ಪಾತ್ರಗಳಾದ ಕೃಷ್ಣ, ರಾಮ, ಭೀಮ, ಸುಯೋಧನನಾಗಲಿ, ಸಾಮಾಜಿಕ ನಾಟಕಗಳ ತ್ಯಾಗಿ ಅಣ್ಣನಾಗಲಿ, ಊರ ಗೌಡನಾಗಲಿ, ಎಲ್ಲಾ ಪಾತ್ರಕ್ಕೂ ಸೈ ಎನ್ನುವ ಹೆಮ್ಮನಹಳ್ಳಿ ಪುಟ್ಟಸ್ವಾಮಿ ಅವರ ಕಲಾ ಬದುಕು ವಿಶಿಷ್ಟ ಹಾಗೂ ವಿಭಿನ್ನ.

ಹೆಮ್ಮನಹಳ್ಳಿ ಚೌಡಯ್ಯ- ಚಿಕ್ಕೋಳಮ್ಮ ದಂಪತಿ ಪುತ್ರರಾಗಿ 1949ರಲ್ಲಿ ಜನಿಸಿದ ಪುಟ್ಟಸ್ವಾಮಿ, ರೇಷ್ಮೆ ಇಲಾಖೆಯ ನಿವೃತ್ತ ನೌಕರ. 18ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಕಾಲಿಟ್ಟರು. ಬಣ್ಣದ ಗೀಳು ಇಂದಿಗೂ ಬಿಟ್ಟಿಲ್ಲ.

ಪೌರಾಣಿಕ ನಾಟಕಗಳಾದ `ಕುರುಕ್ಷೇತ್ರ, ಶ್ರೀಕೃಷ್ಣ ಸಂಧಾನ, ಸಂಪೂರ್ಣ ರಾಮಾಯಣ, ರಾಜಸೂಯಯಾಗ~ ಸಾಮಾಜಿಕ ನಾಟಕಗಳಾದ `ಬಸ್ ಕಂಡಕ್ಟರ್, ತ್ಯಾಗಿ, ಮುಕ್ತಿ, ಚಿನ್ನದಗೊಂಬೆ, ತಾಳಿ ಕಟ್ಟಿದರೂ ಗಂಡನಲ್ಲ~ ಸೇರಿ 50ಕ್ಕೂ ಹೆಚ್ಚು ನಾಟಕಗಳಲ್ಲೂ ಅಭಿನಯಿಸಿದ್ದಾರೆ.

`ದೈವ ದುರಂತ ಕರ್ಣ, ಶ್ರೀನಿವಾಸಕಲ್ಯಾಣ, ಸತ್ಯ ಹರಿಶ್ಚಂದ್ರ, ಆ ಹದಿನೆಂಟು ದಿನಗಳು~ ಎಂಬ ಪೌರಾಣಿಕ ನಾಟಕಗಳನ್ನು, ಆರು ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ.  ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ರೂವಾರಿಗಳಲ್ಲಿ ಒಬ್ಬರಾದ ಇವರು ರಾಜ್ಯದ ವಿವಿಧೆಡೆ `ಕುರಿದೊಡ್ಡಿ ಕುರುಕ್ಷೇತ್ರ~ ನಾಟಕದ ಪ್ರದರ್ಶನ ನೀಡಿದ್ದಾರೆ.

ತಾಲ್ಲೂಕು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ.ಶಂಕರೇಗೌಡ ಉತ್ತಮ ರಂಗ ಗಾಯನ ಪ್ರಶಸ್ತಿ, ಸುಬ್ಬಯ್ಯನಾಯ್ಡು ಪ್ರಶಸ್ತಿ, ರಂಗಭೂಷಣ, ನಾಟಕರತ್ನ ಮಾರುತಿ ಸೇರಿ ಇವರ ರಂಗಸೇವೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ. ಕಿರಿಯ ಕಲಾವಿದರಿಗೆ ಪುಟ್ಟಸ್ವಾಮಿ ಅವರ ಕಲಾ ಸೇವೆ ಮಾದರಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.