ADVERTISEMENT

ಪ್ರಮುಖ ನಾಯಕರು, ಶಾಸಕರ ವರ್ಚಸ್ಸಿನ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:40 IST
Last Updated 4 ಜನವರಿ 2011, 9:40 IST

ಮಂಡ್ಯ: ಜಿಲ್ಲೆಯ ಮಟ್ಟಿಗೆ ಈ ಚುನಾವಣೆಯು ಪ್ರಮುಖ ಪಕ್ಷಗಳ ಮುಖಂಡರ ಪ್ರತಿಷ್ಠೆಯನ್ನು ಓರೆಗೆ ಹಚ್ಚಲಿದೆ. ಜೆಡಿಎಸ್ ನಾಯಕ, ಸಂಸದ ಚಲುವರಾಯಸ್ವಾಮಿ, ಲೋಕಸಭೆ-ವಿಧಾನಸಭೆ ಚುನಾವಣೆಯಲ್ಲಿ ಪರಾಭವ ಗೊಂಡಿದ್ದ ಕಾಂಗ್ರೆಸ್‌ನ ಅಂಬರೀಷ್, ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ವರ್ಚಸ್ಸನ್ನು ಓರೆಗೆ ಹಚ್ಚಲಿದೆ.

ಸಂಸದ ಚಲುವರಾಯಸ್ವಾಮಿ ಅವರು ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರದ ಸಾಧನೆಯನ್ನೇ ಪ್ರಮುಖವಾಗಿ ಬಿಂಬಿಸಿದ್ದಾರೆ. ಅಂಬರೀಷ್ ಪಂಚಾಯತ್ ವ್ಯವಸ್ಥೆ ಬಲಪಡಿಸಲು ಕಾಂಗ್ರೆಸ್‌ನ ಕೊಡುಗೆ, ಕೇಂದ್ರ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ್ದರೆ, ಉಸ್ತುವಾರಿ ಸಚಿವರೂ ಆಗಿರುವ ಆರ್. ಅಶೋಕ್ ಅವರಿಗೆ ಜಿಲ್ಲೆಯಲ್ಲಿ ಪಕ್ಷದ ಖಾತೆ ತೆರೆಸುವ ಸವಾಲು ಇದೆ. ಅವರಿಗೆ ಯಡಿಯೂರಪ್ಪ ನೇತೃತ್ವ ಸಾಧನೆಗಳು ನೆರವಾಗಿವೆ ಎಂಬುದನ್ನು ಕಾದು ನೋಡಬೇಕು.

ಉಳಿದಂತೆ, ಜಿಲ್ಲೆಯಲ್ಲಿ ತನ್ನದೇ ಛಾಪು ಮೂಡಿಸಿರುವ ರೈತಸಂಘ ಮುಖ್ಯವಾಗಿ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಅದರ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ರೈತ ಸಂಘ ಗ್ರಾಮೀಣ ಮಟ್ಟದಲ್ಲಿ ಹೊಂದಿರುವ ವರ್ಚಸ್ಸು ತಿಳಿಯಲು ಈ ಫಲಿತಾಂಶ ನೆರವಾಗಲಿದೆ.

ಇನ್ನು ಆಯಾ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ನಾಲ್ವರು ಜೆಡಿಎಸ್ ಶಾಸಕರು, ಇಬ್ಬರು ಕಾಂಗ್ರೆಸ್ ಶಾಸಕರಿಗೆ ತಮ್ಮ ಪ್ರಾಬಲ್ಯ ಸಾಬೀತು ಮಾಡಿಸುವ ಸವಾಲು ಇದೆ. ಮಳವಳ್ಳಿ ಕ್ಷೇತ್ರದಲ್ಲಿ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ  ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕೈ ಹಿಡಿಯಲು ಹೊರಟಿದ್ದು, ಪಂಚಾಯಿತಿ ಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಮತದಾರರು ಈ ಫಲಿತಾಂಶ ಮೂಲಕ ಅವರ ಕೈ ಹಿಡಿಯಲಿದ್ದಾರಾ ಎಂಬ ಪ್ರಶ್ನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.