ಮದ್ದೂರು: ಭೂಮಿಗೆ ಕಳೆದ 8 ವರ್ಷಗಳಿಂದ ಯಾವುದೇ ಬಗೆಯ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಕೇವಲ ಗೋವಿನ ತ್ಯಾಜ್ಯ ಬಳಸಿ ಉತ್ತಮ ಬೆಳೆ ಬೆಳೆದು ನೈಸರ್ಗಿಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ ಸೊಳ್ಳೆಪುರ ಚಂದ್ರಶೇಖರ್.
ಮೊದಲಿಗೆ ಸಾಮಾನ್ಯ ಕೃಷಿ ಪದ್ಧತಿ ಅನುಸರಿಸಿದ್ದ ಇವರು, ನೈಸರ್ಗಿಕ ಕೃಷಿ ಹರಿಕಾರ ಸುಭಾಷ್ ಪಾಳೇಕಾರ್ ಅವರ ’ಶೂನ್ಯ ಬಂಡವಾಳ ಕೃಷಿ’ ಪುಸ್ತಕ ಓದಿ ಪ್ರೇರಿತರಾದರು. ಅಲ್ಲಿಂದ ಆ ಕಡೆ ಹೆಜ್ಜೆ ಹಾಕಿದರು.
ಮೊದಲಿಗೆ ಒಂದು ನಾಟಿ ಹಸು ಖರೀದಿಸಿದ ಇವರು, ಆ ಹಸುವಿನಿಂದ ದೊರಕಿದ ಸಗಣಿ, ಗಂಜಲವನ್ನು ಜೀವಾಮೃತವಾಗಿ ಬಳಸಿಕೊಂಡರು. ಮೂರು ಎಕರೆ ಜಮೀನಿನಲ್ಲಿ ಹಿಪ್ಪುನೆರಳೆ, ಭತ್ತ, ರಾಗಿಯನ್ನು ನೈಸರ್ಗಿಕ ಪದ್ಧತಿಯಲ್ಲಿ ಬೆಳೆದರು. ಆರಂಭದ ವರ್ಷದಲ್ಲಿ ಕಡಿಮೆ ಇಳುವರಿ ಬಂದರೂ ಧೃತಿಗೆಡಲಿಲ್ಲ.
ವರ್ಷಗಳು ಉರುಳಿದಂತೆ ಇನ್ನೆರಡು ನಾಟಿ ಹಸುಗಳನ್ನು ಸಾಕಿದ ಅವರು, ಹೆಚ್ಚಿನ ಗೊಬ್ಬರವನ್ನು ಪಡೆದು ಭೂಮಿಗೆ ಹಾಕಿದರು. ಇವರ ಶ್ರದ್ಧೆಯ ಫಲವಾಗಿ ಇಳುವರಿ ಹೆಚ್ಚಿತು. ಕೃಷಿ ವೆಚ್ಚ ಕಡಿಮೆಯಾಗಿ, ಲಾಭವೂ ದೊರಕತೊಡಗಿತು.
ಇವರು ತಮ್ಮ ಜಮೀನಿನಲ್ಲಿ ಚಿನ್ನಪೊನ್ನಿ, ನಾಗಾ, ಕಣದ ತುಂಬ, ಮೈಸೂರು ಮಲ್ಲಿಗೆ, ರತ್ನಚೂಡಿ, ಅಪ್ಪಟ ದೇಸಿ ಭತ್ತದ ತಳಿ ಬೆಳೆದು ಯಶಸ್ಸು ಸಾಧಿಸಿದ್ದಾರೆ. ಈ ವರ್ಷ ಎಕರೆಗೆ 30 ಕ್ವಿಂಟಲ್ ಭತ್ತ ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಸಾಂಪ್ರದಾಯಿಕ ಬೆಳೆಯೊಂದಿಗೆ ಬಾಳೆ ಬೆಳೆದಿರುವ ಇವರು, ಬಾಳೆಯ ಮಧ್ಯದಲ್ಲಿ ಅಂತರ ಬೆಳೆಯಾಗಿ ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ನೈಸರ್ಗಿಕ ಪದ್ಧತಿಯ ಸೋಯಾಬಿನ್‌ಗೆ ಬೇಡಿಕೆ ಹೆಚ್ಚಿದೆ.
ಕಣ್ಮರೆಯಾಗುತ್ತಿರುವ ವಿವಿಧ ದೇಸಿ ಧಾನ್ಯ ತಳಿ ಸಂಗ್ರಹಿಸಿ, ಉಳಿಸಿ ಬೆಳೆಸುವ ಕೆಲಸಕ್ಕೂ ಮುಂದಾಗಿದ್ದಾರೆ. ತಾವು ಕಲಿತ ನೈಸರ್ಗಿಕ ಕೃಷಿಯ ಪಟ್ಟುಗಳನ್ನು ಇಲ್ಲಿನ ಆಸಕ್ತ ಸ್ಥಳೀಯ ರೈತರಿಗೆ ತರಬೇತಿ ನೀಡುತ್ತಿದ್ದಾರೆ.
'ಸಾವಯವ ಕೃಷಿಯಿಂದ ಭೂಮಿ ಫಲವತ್ತತೆ ಹೆಚ್ಚುತ್ತದೆ. ಇದರಿಂದ ಹೆಚ್ಚಿನ ಇಳುವರಿ ಪಡೆದುಕೊಳ್ಳಬಹುದು. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಫಲವತ್ತತೆ ನಾಶವಾಗುವುದರೊಂದಿಗೆ ಜೀವ ಸಂಕುಲದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಎಲ್ಲಾ ರೈತರು ನೈಸರ್ಗಿಕ ಕೃಷಿ ಅನುಸರಿಸಿದರೆ, ಲಾಭದೊಂದಿಗೆ ಅನಗತ್ಯ ಸಾಲದ ಸುಳಿಯಿಂದ ಮುಕ್ತರಾಗಬಹುದು' ಎನ್ನುವುದು ಅವರ ಅಭಿಪ್ರಾಯ.
ನೈಸರ್ಗಿಕ ಕೃಷಿಯಲ್ಲಿಯೇ ಖುಷಿ ಕಂಡ ಚಂದ್ರಶೇಖರ್ ಅವರ ಸಾಧನೆ ಮೆಚ್ಚಿ ತಾಲ್ಲೂಕು ಆಡಳಿತ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೇ, ಸ್ಥಳೀಯ ಸಂಘ ಸಂಸ್ಥೆಗಳೂ ಇವರನ್ನು ಸನ್ಮಾನಿಸಿವೆ.
ಕೃಷಿ ಮೇಲಿನ ಪ್ರೀತಿ ಅನುಕರಣೀಯ
ಸೊಳ್ಳೆಪುರದ ಕೃಷಿಕ ಚಂದ್ರಶೇಖರ್ ಅವರ ನೈಸರ್ಗಿಕ ಕೃಷಿ ಬಗೆಗಿನ ಪ್ರೀತಿ ಅನುಕರಣೀಯ. ದೇಸಿ ಧಾನ್ಯ ತಳಿಗಳ ಸಂರಕ್ಷಣೆ ಬಗ್ಗೆ ಇರುವ ಅವರ ಕಾಳಜಿ ಹೆಮ್ಮೆ ಮೂಡಿಸುತ್ತದೆ.
–ಡಾ.ಕೆ.ಸಿ. ಸುಷ್ಮಾ, ಕೃಷಿ ಸಹಾಯಕ ನಿರ್ದೇಶಕಿ, ಮದ್ದೂರು
ದೇಸಿ ತಳಿಗಳ ಸಂರಕ್ಷಣೆ ಅಗತ್ಯ
ರೈತ ಚಂದ್ರಶೇಖರ್ ಅವರಂತೆ ಪ್ರತಿಯೊಬ್ಬರೂ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿದರೆ, ಭೂತಾಯಿಗೆ ವಿಷವುಣಿಸುವುದು ತಪ್ಪುತ್ತದೆ. ಕುಲಾಂತರಿ ಬೀಜ ತ್ಯಜಿಸಿ ದೇಸಿ ತಳಿಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು.
-–ಸೋ.ಸಿ. ಶಿವರಾಮು, ರೈತ ಮುಖಂಡರು, ಸೊಳ್ಳೆಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.